ನನ್ನ ಗೆಳೆತನದ ಆಗಸದ....ರವಿ -ಸೋಮ!

ಹೊರಗೆ ಕದವನ್ನು ಯಾರೋ ನಿಧಾನವಾಗಿ ತೆರೆದು, ಅವಸರದಿಂದ ನಡೆದುಹೋಗುತ್ತಿರುವ ಸದ್ದು. ಹೊರಗೆ ಇನ್ನೂ ಬೆಳಕಾಗಿಲ್ಲ! ಕಳ್ಳನಿರಬಹುದೊ? ಭಯವೆನಿಸಿತು. ರಗ್ಗನ್ನು ಮುಖದ ತುಂಬಾ ಹೊದೆದು, ಯೋಚಿಸತೊಡಗಿದೆ, ಇಷ್ಟೊಂದು ಚಳಿಯಲ್ಲಿ ಹೊರಗೆ ಯಾರಿರಬಹುದು?

ಸಂಪೂರ್ಣ ಬೆಳಗಾದೊಡನೆ ಹೊರಗೆ ಬಂದು ಏನಾದರೂ ಮಾಹಿತಿ ಸಿಗಬಹುದೆಂಬಂತೆ ನೋಡಿದೆ, ಯಾವೂದೇ ವಿಷಯದ ಸುಳಿವಿಲ್ಲ. ಮನ ನಿರಾಳವಾಯಿತು. ಆದರೂ ಮನದ ಮೂಲೆಯಲ್ಲೊಂದು ಪ್ರಶ್ನೆ, ಯಾರಿರಬಹುದು ಆ ಕತ್ತಲೆಯಲ್ಲಿ?

ನನ್ನ ಪ್ರೈಮರಿ ಶಾಲೆಯ ವಿಧ್ಯಾಭ್ಯಾಸ ಮುಗಿಯಲು ಮನೆಯ ಮಂದಿ ಕಾಯುತ್ತಿದ್ದರೆನಿಸುತ್ತದೆ. ಪ್ರೈಮರಿ ವಿಧ್ಯಾಭ್ಯಾಸ ಮುಗಿದಿತ್ತು. ಹೊಸ ಮನೆಗೆ ಬಾಡಿಗೆಗೆ ಬಂದಿದ್ದೆವು. ಆ ವಠಾರದಲ್ಲಿ ನಾಲ್ಕೇ ಮನೆ. ಹೈಸ್ಕೂಲ್ ಇನ್ನೂ ಪ್ರಾರಂಭವಾಗಿರಲಿಲ್ಲ. ಏನು ಮಾಡುವುದೆಂದು ತೋಚಲಿಲ್ಲ. ಹೊಸ ಜಾಗ, ಹೊಸ ಜನ. ಆಟವಾಡಲು ಸ್ನೇಹಿತರಾರು ಇರಲಿಲ್ಲ. ಹಾಗೆ ವಠಾರದ ಮುಂಭಾಗಕ್ಕೆ ಬಂದು ನಿಂತೆ. ಅದೇ ಸಮಯಕ್ಕೆ ಒಬ್ಬ ವ್ಯಕ್ತಿ ವಠಾರವನ್ನು ಪ್ರವೇಶಿಸಿದ. ಬಿಳಿಯ ಉಡುಪು ಅಲ್ಲಲ್ಲಿ ಮಣ್ಣಾಗಿತ್ತು, ಒಂದು ಕೈಯಲ್ಲಿ ಕ್ರಿಕೆಟ್ ಬ್ಯಾಟ್, ಮತ್ತೊಂದು ಕೈಯಲ್ಲಿ ಕ್ರಿಕೆಟ್ ಕಿಟ್. ನನ್ನನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿ ವಠಾರದ, ನಮ್ಮ ಮನೆಯ ಎಡಭಾಗದ ಮನೆಗೆ ಒಳಗೆ ಮಾಯವಾದ. ಅದರೆ ನನ್ನ ಮನದಲ್ಲಿದ್ದ ಪ್ರಶ್ನೆಗೆ ಉತ್ತರ ನೀಡಿ ಹೋಗಿದ್ದ.

ಮಾರನೆಯ ದಿನ ಅದೇ ಸಮಯಕ್ಕೆ ಅದೇ ವೇಷದಲ್ಲಿ ಆ ವ್ಯಕ್ತಿ ಪ್ರತ್ಯಕ್ಷನಾದ. ನನ್ನನ್ನೊಮ್ಮೆ ನೋಡಿ ನಕ್ಕ‌. ನಾನು ನಕ್ಕೆ. ತನ್ನ ಪರಿಚಯ ಹೇಳಿಕೊಂಡ. ನಾನು ಹೇಳಿದೆ. ಆಮೇಲೆ ಸಿಗುವ ಎಂದು ಹೇಳಿ ಮತ್ತೊಮ್ಮೆ ಆ ಮನೆಯಲ್ಲಿ ಮರೆಯಾದ.

ನನಗಿಂತ ವಯಸ್ಸಿನಲ್ಲಿ ಎರಡು ವರ್ಷ ಹಿರಿಯನಾತ. ಮುಖ ಕಪ್ಪಾದರೂ, ಕಾಂತಿಯುತ ಕಣ್ಣು, ಸುಂದರ ನಗೆ. ಇಷ್ಟವಾದ!

ಎರಡು ದಿನದಿಂದ ನನಗೆ ಆ ಮನೆ ನಿಗೂಢವಾಗಿತ್ತು. ಆ ಮನೆಯ ಕದ ಯಾವಾಗಲೂ ಮುಚ್ಚಿರುತ್ತಿತ್ತು. ಹೊರಗೆ  ಆ ಮನೆಯಲ್ಲಿನ ಆಗುಹೋಗುಗಳ ಸದ್ದು ಮಾತ್ರ!

ಅಂದು ಭಾನುವಾರ, ಎಂದಿನಂತೆ ಏನೂ ಮಾಡಲು ತೋಚದೇ ಗೇಟಿನ ಬಳಿ ದಾರಿಹೋಕರನ್ನು ಗಮನಿಸುತ್ತಾ ನಿಂತಿದ್ದೆ. ಬಾಗಿಲು ತೆರೆದ ಶಬ್ದ. ತಿರುಗಿ ನೋಡಿದೆ. ಆ ವ್ಯಕ್ತಿ ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಬಾಲನ್ನು ಹಿಡಿದು, ನನ್ನನ್ನು ಆಡಲು ಕರೆದ. ಮನ ಖುಷಿಯಾಯಿತು. ಕಾಣದ ಜಗದಲಿ ಸ್ನೇಹಿತನೊಬ್ಬನ ಉದಯ. ಕತ್ತಲೆಯ ಗೆಳತನದ ಆಗಸದಲಿ ಸೋಮನ ಬೆಳದಿಂಗಳ ಬೆಳಕು!

ನಮ್ಮ ಗೆಳೆತನ ನಿಧಾನವಾಗಿ ಬೆಳೆದಿತ್ತು. ಕೆಲವೊಮ್ಮೆ ಅಣ್ಣನಂತೆ, ಕೆಲವೊಮ್ಮೆ ಗೆಳೆಯನಂತೆ, ಆತ ನನಗೆ ಗೋಚರಿಸುತ್ತಿದ್ದ.  ತುಂಬಾ ಶ್ರಮಜೀವಿ. ಕ್ರಿಕೆಟ್ ಎಂದರೆ ಪ್ರಾಣ! ಜೀವನದಲ್ಲಿ ಎಲ್ಲರಿಗಿಂತ ಮುಂದೋಡಬೇಕೆಂಬ ಹುಮ್ಮಸ್ಸು! ಕ್ರಿಕೆಟ್ನಲ್ಲಿ ಏನಾದರೂ ಸಾಧಿಸಬೇಕೆಂಬ ಹುಚ್ಚು ಬಯಕೆ! ಯಾವುದೇ ಅವಕಾಶವನ್ನು ಕಳೆಯಬಾರದೆಂಬ ಮನಸ್ಸು! ಆಸೆಗಳು ನೂರಾರಿದ್ದವು ಆ ಕಣ್ಣಲ್ಲಿ! ಆದರೆ ಆ ಆಸೆಗಳಿಗೆಲ್ಲಾ ಲಗಾಮು ಹಾಕಿದ್ದವು ಆ ಮನೆಯ ಆರ್ಥಿಕ ಪರಿಸ್ಥಿತಿ!

ಅದೊಂದು ದಿನ. ಎಂದಿನಂತೆ ಆಟವಾಡುತ್ತಿದ್ದೆವು! ಆತನಿಗೆ ಏನನ್ನಿಸಿತೋ, ಇಬ್ಬರೇ ಆಡಲು ಬೇಜಾರು, ಪಕ್ಕದ ರಸ್ತೆಯಲ್ಲಿ ಕೆಲವರು ಕ್ರಿಕೆಟ್ ಆಡುತ್ತಿದ್ದಾರೆ, ನಾವು ಅವರನ್ನು ಸೇರೋಣವೆಂದ. ಸರಿಯೆಂದೆ!  ಅವರು ಐದಾರು ಜನರಿದ್ದರು! ಇವನು ಅವರನ್ನು ಕೇಳಿದ ನಾವಿಬ್ಬರೂ ಆಡಲು ಬರುತ್ತೇವೆಂದು. ಎಲ್ಲರ ಕಣ್ಣು ಆ ಗುಂಪಿನ ಕಪ್ತಾನನತ್ತ ಹೊರಳಿತು. ಆತ ಒಮ್ಮೆ ನಮ್ಮನ್ನು ನೋಡಿದ! ತನ್ನ ಒಪ್ಪಿಗೆಯನ್ನಿತ್ತ. ಆಗ ತಿಳಿಯಲ್ಲಿಲ್ಲ ಒಪ್ಪಿಗೆಯಿತ್ತ ಆ ವ್ಯಕ್ತಿ ನನ್ನ ಗೆಳೆತನದ ಅಗಸದ ರವಿಯೆಂದು!

ಚಂಚಲ ಕಣ್ಣುಗಳು, ಆಗ ತಾನೆ ಚಿಗುರುತ್ತಿದ್ದ ಮೀಸೆ. ನನ್ನದೇ ವಯಸ್ಸು. ತುಂಬಾ ಸಂಯಮಿ. ಯಾವುದೇ ನಿರ್ಣಯ ತೆಗೆದುಕೊಳ್ಳಬೇಕೆಂದರೂ ಮೊದಲು ಯೋಚಿಸುತ್ತಿದ್ದ. ನಂತರ ಕಾರ್ಯಗತನಾಗುತ್ತಿದ್ದ. ತಂದೆ ಸಿನಿಮಾ ನಿರ್ಮಾಪಕರು. ಆದರೆ ಆತನ ಮುಖದಲ್ಲಿದ್ದ ಆ ಸೌಜನ್ಯ, ಆ ಸರಳತೆ ಮತ್ತು ಆ ಮುಖದ ಹಿಂದಿದ್ದ ನಿರಾಳ ಭಾವ ನನಗೆ ನಿಗೂಢವಾಗಿತ್ತು!

ನಾವೆಲ್ಲರೂ ನಮ್ಮ ಗೆಳೆತನದಲ್ಲಿ ಎಷ್ಟು ಕಳೆದುಹೋಗಿದ್ದೆವೆಂದರೆ, ನಮ್ಮ ಗೆಳೆತನವನ್ನು ಆಸ್ವಾದಿಸುವ ಸಮಯವಿರಲ್ಲಿಲ್ಲ. ದಿನ, ಕ್ಷಣಗಳಂತೆ ಉರುಳುತ್ತಿದ್ದವು. ದಿನದ ೨೪ ಘಂಟೆಗಳು ಸಾಕಾಗುತ್ತಿರಲ್ಲಿಲ್ಲ. ಕ್ರಿಕೆಟ್, ವಿಡಿಯೊ ಸಿನಿಮಾ, ಚೆಸ್, ಎಲ್ಲವೂ ಅವರ ಮನೆಯಲ್ಲಿ. ಎಲ್ಲದಕ್ಕೂ ಅವರಿಬ್ಬರದೇ ಸಾರಥ್ಯ. ನಾನು ಅವನ ಮನೆಯಲ್ಲಿ ಒಬ್ಬನಾಗಿದ್ದೆ.

ನಮ್ಮದೇ ಒಂದು ಗುಂಪು. ಎಂಟು ಜನರಿದ್ದೆವು. ಆಡದ ಜಾಗವಿಲ್ಲ. ನೋಡದ ಸಿನಿಮಾವಿಲ್ಲ. ಆಡದ ಆಟವಿಲ್ಲ. ಎಲ್ಲದಕ್ಕೂ ಆತನದೇ ಹಣದ ಸಹಕಾರ.  ಅದರ ಅರಿವು ನಮಗೆ ಬರದಂತೆ ತಾನೇ ಖರ್ಚು ಭರಿಸುತ್ತಿದ್ದ. ಆದರೆ ಯಾವುದೇ ಘಳಿಗೆಯಲ್ಲೂ ನಾನ್ಯಾಕೆ ಅವರ ವೆಚ್ಚವನ್ನು ಭರಿಸಬೇಕೆಂಬ ಯೋಚನೆ ಅಲ್ಲಿರಲಿಲ್ಲ. ಅವನ ಮನೆಯನ್ನು ನಮ್ಮದೇ ಮನೆಯಂತೆ ಭಾವಿಸುತ್ತಿದ್ದೆವು. ಎಷ್ಟೋ ವೇಳೆ, ಸಿನಿಮಾದಲ್ಲಿ  ಉಪಯೋಗಿಸಿದ್ದ, ಉಡುಪು, ಶೂಗಳನ್ನು ನಾವುಗಳೇ ಧರಿಸಿ ಮೆರೆದಾಡಿದ್ದಿದೆ. ಎಷ್ಟೋ ಶೂಟಿಂಗ್ ಗಳಿಗೆ ನಮ್ಮನ್ನು ಕರೆದುಕೊಂಡು ಹೋದದ್ದಿದೆ, ಎಷ್ಟೋ ಸಿನಿಮಾ ನಟರೊಂದಿಗೆ ನಮ್ಮಯ ಭಾವಚಿತ್ರ ತೆಗೆಸಿಕೊಂಡದ್ದಿದೆ. ಎಷ್ಟೋ ಸಿನಿಮಾ ತಾರೆಯರೊಂದಿಗೆ ಮುಖತಃ ಭೇಟಿಯಾದದ್ದಿದೆ. ಯಾವುದೇ ಕಾರ್ಯಕ್ರಮವಿದ್ದರೂ, ಅವನೊಂದಿಗೆ ನಮ್ಮನ್ನು ಕರೆದುಕೊಂಡು ಹೋದದ್ದಿದೆ. ಇಷ್ಟೇ ಸಾಲದೆಂಬಂತೆ, ಊಟಿ, ಸಿದ್ದಗಂಗ ಮಠ, ಹೀಗೆ ಅನೇಕ ಸ್ಥಳಗಳನ್ನು ಅವನ ಖರ್ಚಿನಲ್ಲೇ ನಮ್ಮನ್ನು ಕರೆದುಕೊಂಡು ಹೋಗಿದ್ದ. ಹಣದ ಅಹಂ ಅಲ್ಲಿರಲಿಲ್ಲ. ಅಪ್ಪಟ ಸ್ನೇಹ! ನಾ ಕನಸಿನಲ್ಲೂ ಎಣಿಸಲಾರದಂತ ಅನುಭವಗಳೊದಗಿಸಿದ್ದ. ಜೀವನದ ಮಧುರ ಕ್ಷಣಗಳ ರೂವಾರಿಯಾಗಿದ್ದ!

ನನ್ನ ಗೆಳೆತನದ ಗಗನದ ಚಂದ್ರನದೇ ಇನ್ನೊಂದು ಕಥೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಹಗಲಿರುಳು ಯೋಚಿಸುತ್ತಿದ್ದ. ಸಿಕ್ಕ ಅವಕಾಶಗಳನ್ನು ಎಂದೂ ಸುಮ್ಮನೆ ಬಿಟ್ಟವನಲ್ಲ. ಎಷ್ಟೇ ಕಷ್ಟವಾದರೂ ಅದನ್ನೊಮ್ಮೆ ಪ್ರಯತ್ನಿಸುವ ಇರಾದೆ.

ನನ್ನ ತಂದೆಯದು ಅಡಿಗೆಯ ಕೆಲಸ. ಕೆಲವೊಮ್ಮೆ ಸಹಾಯಕ ಕೆಲಸಗಾರರು ಸಿಗದ ಕ್ಷಣದಲ್ಲಿ, ಮನಸ್ಸಿಲ್ಲದ ಮನಸ್ಸಿನಲ್ಲಿ ಅವರ ಜೊತೆ ಹೋದದ್ದಿದೆ. ಅದೊಂದು ದಿನ ಆತನು ನಮ್ಮೊಂದಿಗೆ ಹೊರಟ! ಸಿಗುವ ಹಣ ಅವನ ವಿದ್ಯಾಭ್ಯಾಸದ ಖರ್ಚಿಗಾಗಬಹುದೆಂದು.  ಯಾವ ಕೆಲಸವು ಕೇವಲವಲ್ಲ ಎಂಬ ಅವನ ಮಾತು ಅಂದು ನನ್ನ ತಂದೆಯ ಮಾತನ್ನು ನೆನಪಿಸಿತ್ತು ಹಾಗೂ ಬದುಕು ಅಷ್ಟೊಂದು ಸುಲಭವಲ್ಲ,ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳಬೇಡವೆಂಬ ಸಂದೇಶವನ್ನು ಮಾತಿನಲ್ಲಿ ಹೇಳದಿದ್ದರೂ ಕೃತಿಯಲ್ಲಿ ತೋರಿದ್ದ.

ಕನ್ನಡದಲ್ಲಿ ಮಾತನಾಡುತ್ತಿದ್ದ ನಮ್ಮನ್ನು ಇಂಗ್ಲೀಷಿನಲ್ಲಿ ಮಾತನಾಡಲು ಪ್ರೇರೇಪಿಸುತ್ತಿದ್ದ. ಎಂದಾದರೂ ಅದು ಉಪಯೋಗವಾಗಬಹುದೆಂದು. ಅದೊಂದು ದಿನ, ನಮ್ಮದೇ ಇಂಗ್ಲೀಷ್ ನಲ್ಲಿ ಮಾತನಾಡುತ್ತ ಕುಳಿತಿದ್ದೆವು. ಅಲ್ಲೊಬ್ಬ ಚಿಂದಿ ಆಯುವನ ವೇಷದ ವ್ಯಕ್ತಿಯೊಡನೆ ನಮ್ಮ ಸಂಭಾಷಣೆ ಮೊದಲಾಯಿತು. ನಾವು ಆತನನ್ನು ಮೊದಲೇ ಕೆಲವು ಬಾರಿ, ಕಸದ ತೊಟ್ಟಿಯಲ್ಲಿನ ಅನ್ನವನ್ನು ತಿನ್ನುವುದನ್ನು ಗಮನಿಸಿದ್ದೆವು. ನಮ್ಮೊಂದಿಗೆ ಮಾತನಾಡುವ ಸಮಯದಲ್ಲಿ ಆತನ ವೇಷಭೂಷಣ ಬದಲಾಗಿತ್ತು. ಆತನಿಗೊಂದು ಕೆಲಸವೂ ದೊರೆತ್ತಿತ್ತು. ಇಂಗ್ಲೀಷನ್ನು ನಮಗಿಂತ ಸುಂದರವಾಗಿ ಮಾತನಾಡುತ್ತಿದ್ದ. ಸಂಭಾಷಣೆಯ ಮಧ್ಯದಲ್ಲಿ ಆತನ ಬಳಿಯಲ್ಲಿದ್ದ ಒಂದು ಬಾಳೆಯ ಹಣ್ಣನ್ನು ನಮ್ಮೊಂದಿಗೆ ಹಂಚಿಕೊಂಡಿದ್ದ. ನನ್ನ ಸ್ನೇಹಿತ ಬೇಡವೆಂದ, ನಾನು ತೆಗೆದುಕೊಂಡಾಗ ಸ್ನೇಹಿತನು ತೆಗೆದುಕೊಂಡ. ನಾನು ತಿನ್ನದೇ ಆತನಿಗೆ ಕಾಣದಂತೆ,ಅತನು ಹೊರಟು ಹೋದ ಮೇಲೆ ಬಿಸಾಡಿದೆ. ನನ್ನ ಸ್ನೇಹಿತ ಆಗಾಗಲೇ ತಿಂದಿದ್ದ. ಸ್ನೇಹಿತನ ಕೋಪಭರಿತ ಮಾತು ಇಂದೂ ನೆನಪಿದೆ. "ಹಸಿವಿನ ಅರಿವಿರುವ ಆತನಾದರೂ ತಿನ್ನುತ್ತಿದ್ದ". ಕಪಾಳಕ್ಕೆ ಹೊಡೆದಂತಾಯ್ತು. ಜೀವನದ ಮತ್ತೊಂದು ಪಾಠವನ್ನು ಅವನಿಗೆ ಅರಿವಿಲ್ಲದಂತೆ ಹೇಳಿಕೊಟ್ಟಿದ್ದ.

ಅದೊಂದು ದಿನ ಆತ ತುಂಬಾ ಚಿಂತಾಕ್ರಾಂತನಾಗಿದ್ದ. ತನ್ನೊಂದಿಗೆ ನನ್ನನ್ನು ಕರೆದುಕೊಂಡು ಹೊರಟ! ಹೋದ ಮೇಲೆ ತಿಳಿಯಿತು, ಆತ ಜೀವಿಸಲು ಬೇರೆಯದೇ ಮನೆ ಮಾಡುವ ಪ್ರಯತ್ನದಲ್ಲಿದ್ದನೆಂದು. ಜೊತೆಗೆ ಬದುಕಲು ತನ್ನದೇ ಒಂದು ಕೆಲಸವನ್ನು ಹುಡುಕಿ ತಂದಿದ್ದ. ಕಣ್ಣಿನಲ್ಲಿ ಏನೋ ಛಲ! ತನ್ನ ಪ್ರಯತ್ನದಲ್ಲಿ ಎಂದಾದರೂ ಒಮ್ಮೆ ಗೆಲ್ಲುವೆನೆಂಬ ಆತ್ಮವಿಶ್ವಾಸ. ಆದರೆ ನನ್ನ ಮನದಲ್ಲಿ ಭಯ ಮನೆ ಮಾಡಿತ್ತು! ಆತ  ಜಯಿಸಬಲ್ಲನೇ? ಯಾರ ಆಸರೆಯಿಲ್ಲದೆ ಈ ಸಣ್ಣ ವಯಸ್ಸಿನಲ್ಲಿ ಒಬ್ಬನೇ ಬದುಕಬಲ್ಲನೇ? ನನಗೇ ತಿಳಿಯದಂತೆ, ಜೀವನದ ಮತ್ತೊಂದು ಮಜಲನ್ನು ಅನುಭವಿಸಿದೆ. ಅವನ ಜೀವನದ ಹೋರಾಟ ಮನೋಭಾವ ನನ್ನನ್ನು ಒಮ್ಮೆ ಮೂಕವಿಸ್ಮಿತವನ್ನಾಗಿಸಿತ್ತು.

ಈ ತರಹದ ಹಲವು ಘಟನೆಗಳನ್ನು  ಅನುಭವಿಸಿದ್ದಿದೆ. ಪ್ರತಿಯೊಂದು ಹಂತದಲ್ಲೂ ಆತನ ಹೋರಾಟ ಮನೋಭಾವ ಆಶ್ಚರ್ಯ ತರಿಸುತ್ತಿತ್ತು. ಜೀವನವನ್ನು ನೋಡುವ ಬಗೆಯನ್ನು ಆ ಸಣ್ಣವಯಸ್ಸಿನಲ್ಲೇ ಅರಿತಿದ್ದ. ನನ್ನ ಪ್ರತಿ ಹಂತದಲ್ಲೂ, ಪರೋಕ್ಷವಾಗಿ, ಅಪರೋಕ್ಷವಾಗಿ ಜೀವನದ ಪಾಠವನ್ನು ಭೋಧಿಸಿದ್ದ. ಹೊರಗಿನ ಸುಂದರ ಬದುಕನ್ನು ಅಹ್ವಾದಿಸುವ ಮುಂಚೆ ನಮ್ಮನ್ನು ನಾವು ಸುಂದರವಾಗಿಟ್ಟುಕೊಳ್ಳಬೇಕೆಂಬ ಪಾಠದಿಂದ ಹಿಡಿದು, ಯಾವುದೇ ಉತ್ತಮವಾದ ಕಾರ್ಯವನ್ನು ಮಾಡಲು ಬೇಕಾಗಿರುವುದು, ಧೈರ್ಯ ಮತ್ತು ಮನಸ್ಸು ಎಂಬುದನ್ನು ಕಲಿಸಿಕೊಟ್ಟಿದ್ದ.

ಆ ವಯಸ್ಸು ಅಂತಹುದು. ಜೀವನದ ಪ್ರೌಢ ವಯಸ್ಸಿನತ್ತ ಹೆಜ್ಜೆ ಹಾಕುತ್ತಿದ್ದ ಕಾಲ. ಅಂದು ದೊರೆವ ಗೆಳೆಯರು, ನಮ್ಮ ಜೀವನವನ್ನು ರೂಪಿಸುವುದರಲ್ಲಿ ಕಾರಣಕರ್ತರೂ ಆಗಿರುತ್ತಾರೆ. ಮನೆಮಂದಿಗಿಂತ ಹೆಚ್ಚಿನ ಸಮಯ ಅವರೊಂದಿಗೆ ಕಳೆದಿರುತ್ತೇವೆ. ಎಷ್ಟೋ ವಿಷಯಗಳನ್ನು ವಿನಿಮಯ ಮಾಡಿಕೊಂಡಿರುತ್ತೇವೆ. ಎಷ್ಟೋ ತುಂಟಾಟಗಳಿಗೆ ಸಾಕ್ಷಿಯಾಗಿರುತ್ತೇವೆ. ಜೀವನದ ಭರವಸೆಯ ನಡಿಗೆಗೆ ಆತ್ಮವಿಶ್ವಾಸ ಪಡೆದುಕೊಂಡಿರುತ್ತೇವೆ. ಅಂದು ದೊರೆತ ಆ ಗೆಳೆಯರು ನನ್ನ ಕಪ್ಪು ಬಿಳುಪಿನ ಜೀವನಕ್ಕೊಂದು ರಂಗನ್ನು ತಂದಿದ್ದರು! ನನ್ನ ಗೆಳೆತನದ ಬಾನಲ್ಲಿ ರವಿ-ಚಂದ್ರರಾಗಿದ್ದರು.

ನಾವೆಲ್ಲರೂ ಬೇರಾಗುವ ಮುಂಚೆ, "3 Idiots" ನ ಚತುರನಂತೆ ನಾನೊಂದು ಪಂದ್ಯವನ್ನೊಡ್ಡಿದ್ದೆ. ಯಾರು ಮೊದಲು ಕಾರನ್ನು ಕೊಂಡುಕೊಳ್ಳುತ್ತಾರೆಂದು. ಆಗ ಅರಿವಿರಲ್ಲಿಲ್ಲ, ಜೀವನದ ಪಂದ್ಯವನ್ನು ಗೆಲ್ಲಲು ಬೇಕಾಗಿರುವುದು ಕಾರಲ್ಲ, ಅದನ್ನು ಪಡೆಯುವ ಯೋಗ್ಯತೆ! ಅದನ್ನು ಅವರಿಬ್ಬರೂ ಯಾವಗಲೋ ಪಡೆದಿದ್ದರು. ಪಂದ್ಯ ಪ್ರಾರಂಭವಾಗುವ  ಮುನ್ನವೇ ಗೆದ್ದಿದ್ದರು!








Comments

Popular posts from this blog

ಒಂದು ಮಗುವಿನ ಕಥೆ...

ಝಣ...ಝಣ...ಹಣದ ನಿನಾದ!

ಗಿರಿಕನ್ಯೆ......ನನ್ನ ಮನದನ್ನೆ!