ಸಿಂಪಲ್ಲಾಗ್ ಒಂದ್ ನೋವ್ ಸ್ಟೋರಿ!

"ಏ ಸೀನ ನಿಂತ್ಕೊಳ್ಲ" ಯಾರೋ ಕರೆದಂಗಾಯ್ತು. ಹಿಂದುರಿಗಿ ನೋಡಿದೆ. ನಿಂತೆ. ಕರೆದ ವ್ಯಕ್ತಿ ಹತ್ತಿರ ಬಂದು. "ಏನ್ಲಾ ಎಸ್ಟು ವರ್ಸ ಆಯ್ತಲಾ ನೋಡಿ ನಿನ್ನ". ಯಾರೆಂದು ಗೊತ್ತಾಗ್ಲಿಲ್ಲ ನೀವು. ಎಂದೆ. ಬಡ್ಡ್ಐತದೆ ನನ್ನೇ ಮರ್ತೇನ್ಲಾ ನೀನು. ನಾನು ಕಣ್ಲಾ ಮಂಜ, ನಿನ್ ಚಡ್ಡಿ ದೋಸ್ತು!

ನನ್ನ ಮುಖ ಅರಳಿತು. ಎಷ್ಟೋ ವರುಷದ ಹಿಂದಿನ ನಮ್ಮ ಗೆಳೆತನ ನೆನಪಿಗೆ ಬಂತು. ಮಾತು ಅವನ ದಾಟಿಗೆ ಹೊರಳಿತು. ಏ ಮಂಜ ಎಲ್ಲಿದ್ಯ್ಲ ನೀನು? ಮೊನ್ನೆ ಹಳ್ಳಿಗೆ ಬಂದು, ಅವ್ವನ ಕೇಳಿದ್ರೆ, ನೀನು ಮನೆ ಬಿಟ್ಟು ಹೊಂಟೊಗಿದ್ಯ ಅಂತಾ ಹೇಳಿದ್ರು? ಪ್ರಶ್ನೆ ಎಸೆದೆ. ಅವನ ಮುಖ ಚಿಕ್ಕದಾಯಿತು‌.  "ಅದಾ ಅದು ದೊಡ್ ಕತೆ ಕಣ್ಲಾ, ಹೇಳ್ತೀನಿ. ನೀನೇನ್ಲಾ ಇಲ್ಲಿ? ಹೊಲ ಗಿಲ ಎಲ್ಲಾ ಮಾರಿಬಿಟ್ಯಂತೆ ಖರೇ ಏನ್ಲಾ?" ಮುಖ ಚಿಕ್ಕದಾಗುವ ಸರದಿ ನನ್ನದಾಯಿತು.  ಹೂ ಕಣ್ಲಾ, ಪಟ್ಣ ಸೇರಿ ಏನಾರ ಮಾಡವ ಅಂತಾ ಬಂದೆ. ಖರ್ಚಿಗ್ ಒಸಿ ಕಾಸ್ ಬೇಕಿತ್ತು. ಇದ್ದಿದ್ದು ಒಂದು ಹೊಲ ಮಾರಿ ಹಳ್ಳಿ ಹಂಗೇ ಬೇಡಂತಾ ಬಂದ್ಬುಟ್ಟೆ ಕಣ್ಲಾ!" ಕಣ್ಣಿನ ಕೊನೆಯಲ್ಲಿ ಮೂಡಿದ ಕಣ್ಣಿರನ್ನು ಅತನಿಗೆ ತಿಳಿಯದ ರೀತಿಯಲ್ಲಿ ಒರೆಸಿಕೊಂಡೆ".

ಏನ್ ಮಾಡ್ಕಂಡಿದ್ಯಲಾ ನೀನು. ಅವನ ಪ್ರಶ್ನೆಗೆ ಉತ್ತರವಿದ್ದರೂ ನೀಡದೆ, ಮಾತು ಬದಲಾಯಿಸಿದೆ. ಅದಿರ್ಲಿ ಮಂಜ, ನೀನೆಂಗ್ಲಾ ಇಲ್ಲಿ?

”ಏ ಒಸಿನಾ ನನ್ ಕಷ್ಟ. ಆ ಮಾದ ಕೂಡಾ ಇಲ್ಲೇ ಅವ್ನ್ಲಾ. ದೊಡ್ ಕಂಪ್ನಿನಾಗೆ ಕೆಲ್ಸ್ವಂತೆ. ಇಂಗ್ಲೀಸ್ ಗಿಂಗ್ಲೀಸ್ ಶಾನೆ ಮಾತಡ್ತಾನ್ಲ. ನಂಗೂ ಒಂದು ಶಾನೇ ಚೆಂದಾಕಿರೋ ಕೆಲ್ಸ್ವ ಕೊಡ್ಸ್ತಾನಂತೆ ಕಣ್ಲಾ, ಅವನ್ನೇ ನೋಡಕ್ ಹೊಂಟೀವ್ನೀ."

"ಎಷ್ಟೊತ್ಗೆ ಬರಕ್ ಹೇಳವನ್ಲ?"

"ಸಂಜಿಗ್ ಕಣ್ಲಾ ಈಗ್ ಅವ್ನಿಗೆ ಪೊನ್ ಹಚ್ಚಿದ್ದೆ. ಸಾನೆ ಕೆಲ್ಸವಂತೆ, ಸಂಜಿಯಷ್ಟೊತ್ತಿಗೆ ಸಿಗ್ತಾನಂತ್ ಕಣ್ಲ. ಸಂಜಿಗಂಟಾ ಎನ್ ಮಾಡೋದ್ ಅಂತಾ ಚಿಂತಿಮಾಡ್ತಿದ್ದೆ. ನಿನ್ ಸಿಕ್ಕ್ದೆ ಕಣ್ಲಾ". ಇಷ್ಟು ಹೇಳುವಾಗ ನಾನು ಸಿಕ್ಕಿದ ಸಂತಸ ಅವನ ಕಣ್ಣಲ್ಲೊಂದು ಮೂಡಿದ ಹೊಳಪಿನಲ್ಲಿತ್ತು.

" ಏ ಅದಕ್ಕೆನ್ಲಾ, ನಾನು ಸ್ವಲ್ಪ ಫ್ರೀ ಆಗೆ ಇದೀನ್ಲಾ, ಬಾರ್ಲ ಕ್ಯಾಂಟಿನಾಗೆ ಕಾಪಿ ಕುಡಿತ ಹರಟೆ ಹೊಡಿಯುವ" ಅವನನ್ನು ಕರೆದುಕೊಂಡು ಕಂಪನಿಯ ಕ್ಯಾಂಟಿನ್ ಕಡೆಗೆ ಹೊರಟೆ.

ಕ್ಯಾಂಟಿನ್ ನಲ್ಲಿ ಕುಳಿತು ಕಾಫಿ ಕುಡಿಯುತ್ತಾ ಮಂಜನ ಪ್ರಶ್ನೆಯೊಂದು ಎದುರಾಯಿತು. "ಈ ಪಟ್ಣದ್ ಜನ ಬೋ ಕುಸಿಯಾಗವರ್ಲ. ಹಳ್ಳಿನಾಗ ನಾವು ಸಾನೆ ಕೆಲ್ಸ ಮಾಡಿದ್ರು, ಇಷ್ಟ್ ಕುಸಿ, ಇಷ್ಟು ಹಣ, ಸಾದ್ಯವೆನ್ಲಾ! ಅದ್ಕೆ ಹಳ್ಳಿ ಸವಾಸ ಬೇಡ್ವೆಬೇಡಂತಾ ಬಂದ್ಬಿಟ್ಟೆ ಕಣ್ಲಾ".

"ಹು ಕಣ್ಲಾ ನಿನ್ ಹೇಳಿದ್ ಸರಿ. ನಮ್ಮಂಗೆ ನನ್ನ ದೋಸ್ತ್ ಒಬ್ಬ ಹಳ್ಳಿ ಬಿಟ್ಟು ಪಟ್ಟ್ಣ ಸೇರವ್ನೆ. ಅವ್ನ ಕಥೆ ಹೇಳ್ತೀನಿ, ಮುಂದೆ ಗುರುತು ಮಾಡಿಕೊಡ್ತೀನಿ ಕಣ್ಲಾ!" ಅವನ ಒಪ್ಪಿಗೆಗೂ ಕಾಯದೆ ಕಥೆ ಮೊದಲಿಟ್ಟೆ.

ನನ್ನ ಗೆಳೆಯನದು ತುಂಬಿದ ಸಂಸಾರ, ಅಜ್ಜ ಅಜ್ಜಿ, ತಾಯಿ ತಂದೆ, ಅಣ್ಣ ತಮ್ಮ, ಅಕ್ಕ ತಂಗಿ ಹೀಗೆ ಪ್ರತಿ ಸಂಬಂಧಗಳ, ಬಂಧಗಳೊಂದಿಗೆ ಬಂಧಿಯಾಗಿದ್ದ. ಅವನ ವಿದ್ಯಾಭ್ಯಾಸ ಮುಗಿಯುವವರೆಗೂ ಜೀವನ ಸುಗಮವಾಗಿ ನಡೆಯುತ್ತಿತ್ತು. ನಂತರ ನಿಧಾನವಾಗಿ ಅಜ್ಜ ಅಜ್ಜಿಯ ಕಿರಿಕಿರಿ, ಅಪ್ಪನ ಬೈಗುಳ, ಅಮ್ಮನ ಮಗಳ ಮದುವೆಯಾಗಿಲ್ಲವೆಂಬ ಹಪಾಹಪಿ, ಅಕ್ಕನ ಮುನಿಸು, ತಮ್ಮ ತಂಗಿಯರ ಕಾಟ, ಏಕೊ ಅವನ ಜೀವನವನ್ನೇ ಬೇಸರವನ್ನಾಗಿಸಿತ್ತು. ಯಾರಿಗೂ ಹೇಳದೆ ಮನೆ ಬಿಟ್ಟು ಓಡಿಹೋಗಿಬಿಡಬೇಕೆಂಬ ಯೋಚನೆ. ಅಜ್ಜ ಅಜ್ಜಿಗೆ ಮೊಮ್ಮಗ, ಕೆಟ್ಟ ಸಹವಾಸದಿಂದ ದಾರಿ ತಪ್ಪಬಹುದೆಂಬ ರೇಗಾಟ ಒಂದು ಕಡೆಯಾದರೆ, ಅಪ್ಪನಿಗೆ ಹೊಲದಲ್ಲಿ ಮಗ ಅವರ ನೆರವಿಗೆ ಬರುತ್ತಿಲ್ಲವೆಂಬ ಕೋಪ. ಅಮ್ಮನಿಗೆ ಮಗಳಿಂದರದೆ ಚಿಂತೆ, ಮದುವೆಯಾಗದ ಅಕ್ಕ ತಂಗಿಯರ ಕಸಿವಿಸಿ. ಓದಿಲ್ಲದ ಅಣ್ಣ, ಅನ್ಯ ಮಾರ್ಗವಿಲ್ಲದೆ ಅಪ್ಪನ ಕೆಲಸವನ್ನೇ ಮುಂದುವರಿಸುವ ಕನವರಿಕೆಯಲ್ಲಿ, ಹಳ್ಳಿಯಲ್ಲಿ ಪದವಿ ಪಡೆದವರ ಕೆಲವರೇ ಕೆಲವರ ಪೈಕಿಯಲ್ಲಿ ಒಬ್ಬನಾದ ಅವನು ಅದೇ ಕಾಯಕವನ್ನೇ ಮಾಡಬೇಕೆಂಬ ಹಠ. ತಮ್ಮನೊ ಯಾವುದೇ ಜವಾಬ್ದಾರಿಯಿಲ್ಲದ, ಎಲ್ಲದಕ್ಕೂ ಅವನ ಹಿಂದೆಯೇ ಬರುವ ಅಸಾಮಿ. ಜೀವನ ಅಸಹನೀಯವಾಗತೊಡಗಿತು. ಅವನ ಗೆಳೆಯರೆಲ್ಲರೂ ಅರಾಮವಾಗಿರುವುದ ಕಂಡು. ಅವನ ಜೀವನ, ಅವನಿಗೆ ಜಿಗುಪ್ಸೆ ಉಂಟುಮಾಡತೊಡಗಿತು. ಪ್ರೀತಿಸಿದ ಹುಡುಗಿಯ ಬಳಿ, ಪ್ರೇಮ ನಿವೇದನೆಗೆ, ಕೆಲಸವಿಲ್ಲದ ನನ್ನನ್ನು ಅವಳು ಬರೀಯೆ ನನ್ನ ವಿದ್ಯಾಭ್ಯಾಸ ವನ್ನು ನಂಬಿ ನನ್ನೊಂದಿಗೆ ಬರುವಳೇ ಎಂಬ ಆತನ ಯೋಚನೆ, ಅವನಿಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಅದು ಪಟ್ಟಣ ಸೇರಿಯೇ ಎಂದು ತೀರ್ಮಾನಿಸಿದ.  ಹಳ್ಳಿ ಬಿಡುವುದೇನೋ ಸರಿ ಆದರೆ ಖರ್ಚಿಗೆ ಹಣ? ಅಪ್ಪ ತನ್ನ ಹೆಸರಿಗೆ ಮಾಡಿದ್ದ ಎರಡೆಕರೆ ಹೊಲವನ್ನು ಅವರಿಗೆ ತಿಳಿಯದಂತೆ, ಅ ಹೊಲದ ಮೇಲೆ ಮೊದಲಿಂದಲು ಕಣ್ಣಿಟ್ಟಿದ್ದ, ವ್ಯಕ್ತಿಯೊಬ್ಬನಿಗೆ ಮಾರಿ, ರಾತ್ರೋರಾತ್ರಿ ಹಳ್ಳಿ ಬಿಟ್ಟು, ಪಟ್ಟಣ ಸೇರಿದ್ದ.

ಮಂಜ ಮದ್ಯೆ ಬಾಯಿ ಹಾಕಿದ. ”ಹೌದು ಕಣಾ, ಅವನ್ ಕಥೆ ಕೇಳ್ತಿದ್ರೆ ಬೇಸರ ಅಗ್ತೈತಿ, ನಂದೇ ಕತೆ ಅನ್ಸ್ತೈತಿ. ನಮ್ ಗೋಳ್ ಯಾರು ಕೇಳಲ್ಲ ಕಣ್ಲಾ, ಈಗ ಹೇಗಿದ್ದನ್ಲಾ ಅವ್ನು?"

ಪಟ್ಟಣ ಸೇರಿದ ನನ್ನ ಗೆಳೆಯನಿಗೆ, ಏನೊ ಸಾಧಿಸಬೇಕೆಂಬ ಛಲ. ಪಟ್ಟಣದ ಜನರ ಮೊಗದಲ್ಲಿದ್ದ ಆ ಸಂತಸ, ಆ ಬಿಗುಮಾನ, ಆ ಜೀವನ ಕಂಡು, ಪಟ್ಟಣ ಸೇರಿ ಪುನೀತನಾದ ಅನುಭವ. ಕಾರಿನಲ್ಲಿ ಓಡಾಡುತ್ತಿರುವ, ರಜಾದಿನಗಳಲ್ಲಿ, ಹೋಟೆಲ್ ಮಾಲ್ ಗಳಲ್ಲಿ ಜನರ ಜಂಗುಳಿಯನ್ನು ನೋಡಿ ವಿಸ್ಮಿತನಾಗಿದ್ದ. ಜೀವನ ಖುಷಿಯಿಂದ ಕಳೆಯಲು ಎಷ್ಟೊಂದು ದಾರಿಗಳು! ಕೆಲಸವೊಂದನ್ನು ಗಳಿಸಿಕೊಂಡೆನೆಂದೆರೆ, ಜೀವನ ಸಾಧಿಸಿದಂತೆ, ಮುಂದಿನ ಜೀವನವೆಲ್ಲಾ ವರ್ಣಮಯ! ಪ್ರೀತಿಸಿದ ಹುಡುಗಿಯ ನೆನಕೆ, ಹಳ್ಳಿಯ ಗೆಳೆಯರ ಆಶ್ಚರ್ಯಭರಿತ, ಅಸೂಯೆಭರಿತ ನೋಟ, ಇವೆಲ್ಲ ನೆನಸಿ ಪುಳಕಿತನಾಗಿದ್ದ.

ನೆನಸಿದ್ದಂತೆ ದೊಡ್ಡ ಕಂಪನಿಯಲ್ಲಿ ಉದ್ಯೋಗ ಕೂಡಾ ಪಡೆದುಕೊಂಡ, ಐದು ದಿನಗಳ ಕೆಲಸ, ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು ಮನಸ್ಸಿನ ಪರಿಸ್ಥಿತಿ.  ಹಳ್ಳಿಯ ಬಿಡಲು ತಡಮಾಡಿದೆ ಎಂಬ ಒಂದೇ ಒಂದು ಪಶ್ಚಾತ್ತಾಪ!

ಮೊದಲ ತಿಂಗಳಿನ ಸಂಬಳ, ಜೀವನವನ್ನು ಮತ್ತಷ್ಟು ವರ್ಣಮಯವಾಗಿಸಿತ್ತು. ಹಳ್ಳಿಯಲ್ಲಿ ಇದ್ದಿದ್ದರೆ ಪ್ರತಿ ತಿಂಗಳು ಇಷ್ಟೊಂದು ಹಣವನ್ನು ನೋಡಲು ಸಾಧ್ಯವಾಗುತ್ತಿತ್ತೇ, ಅದೇ ಹೊಲದಲ್ಲಿ, ಅದೇ ಜನರ ಸಾನಿದ್ಯದಲ್ಲಿ, ಅದೇ ಕುಟುಂಬದ ರೋದನೆಯಲ್ಲಿ, ಸಾಮಾನ್ಯ ಜೀವನ ಸಾಗಿಸಬೇಕಿರುತ್ತಿತ್ತು ಎಂದೆನಿಸಿತು.

ಮಂಜ ಮತ್ತೊಮ್ಮೆ, ನನ್ನ ವಾಕ್ಲಹರಿಗೆ ವಿರಾಮವನಿತ್ತ. "ಹ್ಙೂ ಕಣ್ಲಾ, ನಂಗ್ ಒಂದ್ ಕೆಲ್ಸ ಸಿಕ್ಬಿಟ್ರೆ, ಬೋ ಚೆಂದಾಗಿರ್ತದ್ಲ, ನಾವ್ ದೋಸ್ತ್, ಒಟ್ಗೆ ಸೇರ್ಬೋದು".  ಅವನ ಕಣ್ಣಲ್ಲಿದ್ದ ಕಾಂತಿ ಅವನ ಮುಂದಿನ ಜೀವನದ ಕನಸನ್ನು ಹೇಳುತ್ತಿತ್ತು.

ತಿಂಗಳಿನ ಸಂಬಳ, ಕೊಡಬೇಕಿದ್ದ ಸಾಲ, ಇತರೆ ಖರ್ಚು ವೆಚ್ಚವೆಲ್ಲಾ, ಮೀರಿ ತುಸು ಉಳಿದಿತ್ತು. ಹೋಟೆಲಿನಲ್ಲಿ ಪೊಗದಸ್ತಾದ ಭೋಜನ, ಮಾಲ್ನಲ್ಲಿ ಮೆಚ್ಚಿನ ನಟನ ಸಿನಿಮಾ, ವಾರದ ರಜೆಯನ್ನು ಸುಂದರವಾಗಿಸಿತ್ತು. ಏನೋ ಸಾಧಿಸಿದಂತೆ, ಪಟ್ಟಣದ ಜನರಲ್ಲಿ ಒಂದಾದ ಅನುಭವ. ಮುಂದಿನ ತಿಂಗಳುಗಳ ಸಂಬಳಗಳ ಉಳಿಕೆಯಲ್ಲಿ, ಸಾಲವೊಂದಿಷ್ಟು ಮಾಡಿ ಬೈಕ್ ಕೊಂಡುಕೊಳ್ಳುವ ಕನಸು!

ದಿನ ಕಳೆದಂತೆ, ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಿತು! ಕೆಲವೊಂದು ಬಾರಿ, ರಜಾದಿನಗಳಲ್ಲೂ ಕೆಲಸ ಮಾಡುವ ಅನಿವಾರ್ಯತೆ. ಬೈಕ್ ಹೋಗಿ, ಓಡಾಡಲು ಕಾರು ಕೊಂಡುಕೊಂಡಾಗಿತ್ತು, ಕನಸಿನ ಹುಡುಗಿಯ ಜಾಗದಲ್ಲಿ, ಕಂಪನಿಯ ಸಹೋದ್ಯೋಗಿ ಮನವನ್ನು ಆಕ್ರಮಿಸಿಕೊಂಡಾಗಿತ್ತು. ಹೋಟೆಲ್, ಮಾಲ್ ಗಳು  ಆಸಕ್ತಿ ಕಳೆದುಕೊಂಡಿದ್ದವು, ಅದನ್ನು ಯೋಚಿಸುವ ಸಮಯಾವಕಾಶ ಕಂಪನಿಯ ಕೆಲಸದಲ್ಲಿ ಕಳೆದು ಹೋಗಿದ್ದವು. ಈಗ ಮನಸ್ಸಿನಲ್ಲಿ ಇದ್ದಿದ್ದಿಷ್ಟೆ, ಸಹೋದ್ಯೋಗಿಯೊಂದಿಗೆ ಮದುವೆಯಾಗಿ ಸಂಸಾರ ಸಾಗಿಸುವುದು. ತನ್ನ ಬಿಡುವಿರದ ಕೆಲಸದ ಮಧ್ಯೆ, ಸಹೋದ್ಯೋಗಿ ಯೊಂದಿಗೆ, ತನ್ನ ಮನದಾಳದ ಮಾತನ್ನು ಬಿಚ್ಚಿಟ್ಟ. ಆ ಕಡೆಯಿಂದ ಅನುಮತಿಯು ದೊರೆಯಿತು. ಮನ ಹಕ್ಕಿಯಾಗಿತ್ತು.

ಮದುವೆಯ ನಂತರದ ಕೆಲದಿನಗಳು, ಸರಸ ಸಲ್ಲಾಪಗಳಿಂದ ಕೂಡಿತ್ತು. ಹನಿಮೂನಿಗೆ ಸ್ವಿಡ್ಜರ್ಲ್ಯಾಂಡ್ ಗೂ ಹೋಗಿಬಂದ. ನಂತರ ಮತ್ತದೇ ಕೆಲಸ, ಇಬ್ಬರಿಗೂ ರಾತ್ರಿ ಪಾಳಿ, ಕೆಲಸದಿಂದ ಬಂದೊಡನೆ, ಕನವರಿಕೆಯ ನಿದ್ದೆಯಲ್ಲದ ನಿದ್ದೆ. ಹೆಂಡತಿಗೆ ಗಂಡನೊಡನೆ, ಗಂಡನಿಗೆ ಹೆಂಡತಿಯೊಡನೆ, ಮಾತನಾಡಲು ಸಮಯವಿಲ್ಲ, ನಿಜಹೇಳಬೇಕೆಂದರೆ ಏನೂ ವಿಷಯವಿಲ್ಲ. ಸಾಲದಕ್ಕೆ ಗಂಡ ಹೆಂಡತಿ ಒಂದೇ ವಿಭಾಗದಲ್ಲಿರಬಾರದೆಂದು, ಇವನಿಗೆ ಅನ್ಯ ವಿಭಾಗಕ್ಕೆ ವರ್ಗಾವಣೆ.

ಕ್ರಮೇಣ ದಾಂಪತ್ಯದಲ್ಲಿ ಬಿರುಕು ಮೂಡಲು ಪ್ರಾರಂಭಿಸಿತು, ಇಬ್ಬರಿಗೂ ನಾನು ದುಡಿಯುತ್ತಿದ್ದೆನೆಂಬ ಅಹಂ. ಮನೆಯ ಕೆಲಸ ಮಾಡಲು ಇಬ್ಬರಲ್ಲೂ ಸಮಯವಿಲ್ಲ. ಒಮ್ಮೆ ಇವನು ಅವಳಿಗೆ ಸಲಹೆಯೂ ಕೊಟ್ಟ, ಕೆಲಸವನ್ನು ಬಿಟ್ಟುಬಿಡು, ನನ್ನಯ ಸಂಬಳದಲ್ಲಿ ಖರ್ಚುವೆಚ್ಚಗಳನ್ನು ಅನುಸರಿಸಿಕೊಂಡು ಹೋದರಾಯಿತು ಎಂದು. ಆಕೆಯ ಉತ್ತರ, "ನೀನೇ ಕೆಲಸ ಬಿಡು, ನನ್ನಯ ಸಂಬಳ ನಿನ್ನದಕ್ಕಿಂತ ಹೆಚ್ಚು."  ಅವನ ಗಂಡು ಮನಸ್ಸನ್ನು, ಅವಳ ಮಾತು ಘಾಸಿಗೊಳಿಸಿತ್ತು.

ದಾಂಪತ್ಯ ದಿಕ್ಕುಪಾಲಾಗಿ ಹೋಗಿತ್ತು. ಆಫೀಸಿನ ಕೆಲಸ ಕ್ರಮೇಣ ಜಾಸ್ತಿಯಾಗಿತ್ತು, ಮನೆಗೆ ಬಾರದೆ, ಕಂಪನಿಯಲ್ಲೆ ಕಳೆಯುವ ದಿನಗಳು ಇಬ್ಬರಲ್ಲೂ ಹೆಚ್ಚಾದವು. ಇವನಿಗೆ ಹೆಂಡತಿಯ ಮೇಲಿನ ಅನುಮಾನ ಹೆಚ್ಚಾದವು, ಅವಳಿಗೆ ಇವನ ಮೇಲೆ ತಿರಸ್ಕಾರ ಭಾವನೆ ಮೊದಲಿಟ್ಟವು.  ಜಗಳ, ಹೊಡೆದಾಟ, ಅಳು, ಕೋಪ, ಹಟ ಮಾಮೂಲಿಯಾಗಿತ್ತು. ಕೊನೆಗೊಮ್ಮೆ ದಾಂಪತ್ಯ ಮುರಿದುಬಿತ್ತು.

ನಿದ್ದೆಯಿಲ್ಲದ, ಕುಡಿತಕ್ಕೆ ಶರಣಾದ ಜೀವ ಜರ್ಝರಿತವಾಗಿತ್ತು. ಆರೋಗ್ಯ ಹದಗೆಟ್ಟಿತ್ತು. ವೈದ್ಯರು ಆ ಅನಾರೋಗ್ಯಕ್ಕೆ ಕ್ಯಾನ್ಸರ್ ಎಂದು ನಾಮಕರಣ ಮಾಡಿದರು.

ಏಕೋ ಅವನಿಗೆ ಹಳ್ಳಿಯ ನೆನಪಾಯಿತು. ಸ್ವಲ್ಪ ತಲೆನೋವೆಂದರೂ ಕಳವಳಗೊಳ್ಳುತ್ತಿದ್ದ ಅಮ್ಮ ನೆನಪಾದಳು, ಮಗನ ಮುಂದಿನ ಜೀವನಕ್ಕೆ ತೊಂದರೆಯಾಗಬಾರದೆಂದು ಇದ್ದ ಎರಡೆಕೆರೆ ಜಾಗವನ್ನು ಮಗನಿಗೆ ಬರೆದ ತಂದೆ ನೆನಪಾದರು. ಕೂಡಿ ಏನನ್ನಾದರೂ ಸಾಧಿಸಬಹುದು ಎಂದು ಹೆಗಲ ಮೇಲೆ ಕೈಹಾಕಿ ಹೇಳುತ್ತಿದ್ದ ಅಣ್ಣ ನೆನಪಾದ.  ಮದುವೆಯಾಗದ ಅಕ್ಕ ನೆನಪಾದರು. ಅಣ್ಣನ ಮೇಲೆ ಅಪಾರ ಭರವಸೆಯಿಟ್ಟಿದ್ದ ತಂಗಿ, ತಮ್ಮಂದಿರು ನೆನಪಾದರು.  ಕನಸಿನ ಹುಡುಗಿ ಕನಸಾಗಿ ಹೋಗಿದ್ದಳು. ಒಬ್ಬೊಂಟಿ ಜೀವನ ಗಹಗಹಿಸಿ ನಕ್ಕಾಂತಾಯಿತು.

ಹೊರಗಿನ ಮಾಲ್, ಹೋಟೆಲುಗಳು, ನರಕಕ್ಕೆ ಆಮಂತ್ರಣ ನೀಡುವ ಜಾಹೀರಾತಿನಂತೆ ಗೋಚರಿಸಿದವು. ಅವಸರದಿಂದ ಓಡಾಡುತ್ತಿದ್ದ ನಿಸ್ತೇಜ ಮುಖಗಳ ಜನಜಂಗುಳಿ, ಶವಗಳ ಮೆರವಣಿಗೆಯಂತೆ ಭಾಸವಾಯಿತು. ತನ್ನ ಮೇಲೆ ತನಗೆ ಅಸಹ್ಯವಾಗತೊಡಗಿತು. ತನ್ನೊಬ್ಬನ ಉಳಿವಿಗಾಗಿ, ಎರಡೆಕೆರೆ ಹೊಲದ ಆಧಾರದ ಮೇಲೆ ಅವಲಂಬಿತವಾಗಿದ್ದ ತನ್ನದೇ ಕುಟುಂಬದ ಅವನತಿಗೆ ಕಾರಣವಾಗಿದ್ದ ಅವನ ಜೀವನಕ್ಕೊಂದು ಧಿಕ್ಕಾರ ತನಗೆ ತಾನೇ ಹೇಳಿಕೊಂಡ.

ಕುಟುಂಬದ ಸದಸ್ಯರೊಂದಿಗೆ ಕ್ಷಮೆಯಾಚಿಸಿ, ಹಳ್ಳಿಗೆ ಹಿಂತಿರುಗಲು ಮನ ಯೋಚಿಸಿತು. ಯಾವ ಮುಖವಿಟ್ಟು ಹೋಗುವುದು ಎಂಬ ಒಳಮನ ಅವನನ್ನು ಹೀಯಾಳಿಸಿತು.

ತನ್ನ ಒಂದು ತಪ್ಪು ನಿರ್ಧಾರ ತನ್ನ ಜೀವನವಲ್ಲದೆ ಇಡೀಯ ತನ್ನದೇ ಕುಟುಂಬವನ್ನು ಬೀದಿಪಾಲಾಗಿಸಿತ್ತು. ಬಾಳಿಗೆ ಬೇಕಾಗಿದ್ದದ್ದು ಸಂತೋಷ, ನೆಮ್ಮದಿ ಮಾತ್ರ! ಅದು ಎಲ್ಲಿ ದೊರೆತರೇನು? ಹಣ, ಕಾರು, ಬಂಗಲೆ, ವಿಲಾಸಿ ಜೀವನ ನಮ್ಮಯ ಇಗೋವನ್ನು ತೃಪ್ತಿಪಡಿಸಲು ಮಾತ್ರ ಎಂಬ ಸತ್ಯದ ಅರಿವಾಗಿತ್ತು. ಹಳ್ಳಿಯಲ್ಲಿನ ತನ್ನದೇ ಸ್ವಂತ ಕೆಲಸ, ಮನಗೊಪ್ಪಿದ ಮಡದಿ, ಕಣ್ತುಂಬ ನಿದ್ದೆ, ಅಜ್ಜ ಅಜ್ಜಿ, ಅಪ್ಪ ಅಮ್ಮ, ಅಣ್ಣ ಅಕ್ಕ, ತಮ್ಮ ತಂಗಿಯರ ಒಡನಾಟದ, ಸಣ್ಣ ಸಣ್ಣ ಜಗಳ, ಕೋಪ, ಪ್ರೀತಿ ಪ್ರೇಮ, ಮಮತೆ ವಾತ್ಯಲ್ಯ, ಜಾಡಿಸಿ ಒದ್ದು ಬಂದಿದ್ದ ಅವನ ತಪ್ಪು ಅರಿವಾಗಿತ್ತು.

ಯಾಕೋ ಕಥೆಯನ್ನು ಮುಂದುವರಿಸಲು ಮನದಲ್ಲಿ ಮೂಡಿದ ದುಃಖ ಅನುವು ಮಾಡಿಕೊಡಲಿಲ್ಲ, ಗದ್ಗದಿತ ಮಾತು ತಡೆತಡೆಯಾಗಿ ಬರುತ್ತಿತ್ತು. ಮಂಜ ತೀರ ಮೌನಿಯಾದ. ಒಮ್ಮೆ ನನ್ನನ್ನು ಬಾಚಿ ತಬ್ಬಿ "ನಾ ಹಳ್ಳಿಗೇ ವಾಪಸ್ ಹೊರಟ್ ಹೊಗವ ಅಂತಾ ಮಾಡ್ವೀನಿ, ನನ್ ಬದ್ಕು ನಿನ್ ದೋಸ್ತ್ ತರ ಆಗೋದ್ ನಂಗೆ ಇಷ್ಟ ಇಲ್ಲಾ ಕಣ್ಲಾ. ಅಪ್ಪ ಅಮ್ಮಂಗ್ ವಯಸ್ಸಾಯ್ತು ಅವರನ್ನ ನೋಡ್ಕೋಬೇಕು ಕಣ್ಲಾ! ಆಗಾಂಗಿದ್ರೆ ನೀನು ವಾಪಸ್ ಬಂದ್ಬಿಡ್ಲಾ!" ಹೇಳುವಾಗ ಅವನ ಕಣ್ಣಿನ ಹನಿ ನನ್ನ ಅಂಗಿಯ ತೋಳಿನ ಭಾಗವನ್ನು ತೋಯಿಸಿತ್ತು. ಮನ "ನಾನು ಬರಕ್ಕಾಗಿಲ್ಲ ಕಣ್ಲಾ, ಆ ಮುಖ ನಂಗಿಲ್ಲ. ಆ ದೋಸ್ತೀನ ಕಥೆ, ಅದು ನನ್ನದೇ" ಎಂದು, ಗಟ್ಟಿಯಾಗಿ ಹೇಳುವ ದೈರ್ಯವಾಗದೆ ಅವನ ಬೆನ್ನನ್ನು ನನ್ನ ಕೈ ನೇವರಿಸುತ್ತಿತ್ತು.Comments

 1. ದೂರದ ಬೆಟ್ಟ ತಣ್ಣಗೆ ನುಣ್ಣಗೆ.. ಪಟ್ಟಣದಲ್ಲಿ ಕಾಣುವುದು ಬರಿ ಭ್ರಮಾಲೋಕ ಬಿಟ್ಟರೆ ಏನೂ ಅಲ್ಲಾ.. ಹಳ್ಳಿ ಬಾಳು ಚೆನ್ನಾ.. ಹಳ್ಳಿ ಬದುಕು ಸುಂದರ ಎನ್ನುವ ತತ್ವವನ್ನು ಎತ್ತಿ ಸಾರುತ್ತದೆ ಈ ನಿನ್ನ ಬರಹ.

  ಹೌದು ನಾವೆಲ್ಲಾ ಯಾವುದೋ ಒಂದು ಮಾಯಾ ಕುದುರೆಯ ಬಾಲದ ನೆರಳನ್ನು ಹಿಡಿದು ಓಡುತ್ತಿದ್ದೇವೆ.. ಅದು ಎಲ್ಲಿ ನಿಲ್ಲುತ್ತದೆಯೋ.. ಎಲ್ಲಿಗೆ ಓದುತ್ತಿದೆಯೋ ಆ ಕಾಣದ ಕೈಗೆ ಗೊತ್ತು.

  ಬಂಧಗಳನ್ನು ಗಾಳಿಗೆ ತೋರಿ.. ಯಾವುದೋ ಒಂದು ಕನ್ನಡಿಯ ಬಿಂಬಕ್ಕೆ ಹೊತ್ತು ನೆಡೆವ ಈ ರೀತಿಯ ಘಟನೆಗಳು ಮನ ಕಲಕುತ್ತದೆ..

  ಪ್ರತಿಯೊಂದು ಸನ್ನಿವೇಶವನ್ನು ಹಳ್ಳಿಯ ಸೊಗಡಿನ ಭಾಷೆಯಲ್ಲಿ ಹೇಳುತ್ತಾ.. ಅರೆ ಆ ಮೂಲೆಯಲ್ಲಿ ನಾವೇ ನಿಂತು ನೋಡುವಂತೆ ಮಾಡುತ್ತದೆ ನಿನ್ನ ಬರಹ.. ಸೂಪರ್ ಸೂಪರ್ ಎನ್ನದೆ ಬೇರೆ ಪದಗಳು ಸಿಗದೇ ನನ್ನ ಕಾಡಿಸುತ್ತಿವೆ..

  ಸೂಪರ್ ಗೆಳೆಯ

  ReplyDelete

Post a Comment

Popular posts from this blog

ನನ್ನ ಸಾಹಿತ್ಯದ ಶ್ರೀಕಾರನ ಸುತ್ತಾ....

ಗಿರಿಕನ್ಯೆ......ನನ್ನ ಮನದನ್ನೆ!