ಒಂದು ಮಗುವಿನ ಕಥೆ...(ಮುಂದುವರೆದ ಭಾಗ)

ಶ್ರೀ ನನ್ನ ಲೇಖನಕ್ಕೆ ಬರೆದ ಕಾಮೆಂಟ್ಸ್,  ಆತನ ತಂದೆಯ ಉಲ್ಲೇಖ, ನನ್ನನ್ನು ತಂದೆಯ ನೆನಪಿಗೆ ದೂಡಿತ್ತು.

ಆಂದು ಮನಸ್ಸು ಛಿದ್ರವಾಗಿತ್ತು, ಏನು ಮಾಡಲಾಗದ ಅಸಹಾಯಕತೆ, ಯಾರ ಮಡಿಲಿನಲ್ಲಿಯಾದರು ತಲೆಯಿಟ್ಟು ಬಿಕ್ಕಿಬಿಕ್ಕಿ ಅತ್ತು ಮನಸ್ಸನ್ನು ತೆರೆದಿಟ್ಟುಕೊಳ್ಳಬೇಕೆಂಬಷ್ಟು ದುಗುಡ! ಹೆಂಡತಿ ಆಗ ತಾನೆ ಹತ್ತಿರವಾಗುತ್ತಿದ್ದಳು!  ಅಕ್ಕಂದಿರು ಅವರದೇ ಆದ ದುಃಖದಲ್ಲಿದ್ದರು! ತಂದೆಯ ಸಾವನ್ನು ಮನಸ್ಸು ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. ಅಪ್ಪ ಇನ್ನೂ ಬೇಕೆನಿಸುತ್ತಿದ್ದರು. ಅವರನ್ನೇ ತಬ್ಬಿಕೊಂಡು ಅಳಬೇಕೆನಿಸುತ್ತಿತ್ತು!  ತಡೆಹಿಡಿದಷ್ಟು ಕಣ್ಣೀರು ಹರಿಯುತಲಿತ್ತು!

೭೯ ವಸಂತಗಳನ್ನು ಕಂಡ ಜೀವ, ಈ ಬದುಕಿಗೊಂದು ಕೊನೆಯ ಸಲಾಮು ಹೇಳಿ, ನಿಶ್ಚಿಂತೆಯಿಂದ ಮಲಗಿತ್ತು. ಅವರ ಮುಖದ ಮೇಲಿನ ಶಾಂತತೆ, ನನ್ನ ದುಃಖವನ್ನು ದ್ವಿಗುಣಗೊಳಿಸಿತ್ತು. ಮುಖದ ಒಂದೊಂದು ಸುಕ್ಕು, ಒಂದೊಂದು ಕಥೆ ಹೇಳುತ್ತಿರುವಂತೆ ತೋರುತ್ತಿತ್ತು. ಅವರ ಜೊತೆ ಕಳೆದ ಒಂದೊಂದೇ ಘಟನೆಗಳು ಅವರಿಲ್ಲವೆಂಬ ನೆನಪು ಮಾಡಿಸಿ, ದುಗುಡವನ್ನು ಹೆಚ್ಚಿಸುತ್ತಿದ್ದವು.

ಬಾಲ್ಯದಲ್ಲಿ ಅಪ್ಪನೆಂದರೆ ಭಯ! ಅವರು ಕೊಡುವ ಏಟಿನ ಗಮ್ಮತ್ತು ಇನ್ನೂ ನೆನಪಿನಲ್ಲಿದೆ! ಬಿಸಿಲಿನಲ್ಲಿ ಆಡುತ್ತಿದ್ದದ್ದನ್ನು ನೋಡಿದರೆ, ಹಿಂದಿನಿಂದ ಚಟೀರ್ ಎಂಬ ಶಬ್ದ, ನಂತರ ಉರಿ! ಬಿಸಿಲಿನಲ್ಲಿ ಆಡುವಾಗ, ದೂರದಿಂದಲೇ ಅವರು ಬರುವುದ ಕಂಡರೆ, ಎದ್ದೆನೊ, ಬಿದ್ದೆನೊ ಎಂಬಂತೆ ದೌಡು! ಅಷ್ಟು ಭಯ!

ಅಪ್ಪನೊಡನೆ ಆಟವಾಡಿದ ನೆನಪಿಲ್ಲ, ಕೂಸುಮರಿ ಮಾಡಿದ ನೆನಪೂ ಇಲ್ಲ! ಅಮ್ಮನೊಂದಿಗೆ ಸಲಿಗೆ, ಏನು ಬೇಕೆಂದರೂ, ಅಮ್ಮನಿಂದ ಅಪ್ಪನವರೆಗೆ!  ಒಬ್ಬಳೇ ತಂಗಿಯೊಂದಿಗೆ ಆಟ, ಅವಳಿಗೆ ಕೊಡುತ್ತಿದ್ದ ಕಾಟ, ಇಬ್ಬರು ಅಣ್ಣ, ಇಬ್ಬರು ಅಕ್ಕಂದಿರೊಡನೆ ಮಾತು, ಅವರು ಹೇಳುತ್ತಿದ್ದ ಕಥೆ,  ಅಮ್ಮನೊಂದಿಗೆ ಹಠ, ಅವಳ ಮುದ್ದು, ಅಪ್ಪನ ಏಟು, ಆ ಕಣ್ಣಿನ ಎಚ್ಚರಿಕೆ, ಸಂಜೆಯ ಭಜನೆ, ಒಟ್ಟಿಗೆ ಊಟ, ನಿದ್ದೆ! ಇಷ್ಟೆ ಮನೆಯ ವಿಷಯ ನೆನಪಿರುವುದು

ನನಗೆ ವಯಸ್ಸು ಎಂಟಿರಬಹುದು ಅದೊಂದು ದಿನ ಅಣ್ಣ ಅಲ್ಲೆ ಹತ್ತಿರದಲ್ಲಿದ್ದ ಅಂಗಡಿಯಿಂದ, ಚಿಲ್ಲರೆ ತರಲು ಕಳುಹಿಸಿದ ನೆನಪು! ಒಂದು ರೂಪಾಯಿಯ ಚಿಲ್ಲರೆ!  ಅಂಗಡಿಯವ ಚಿಲ್ಲರೆಯೇನೋ ಕೊಟ್ಟ! ಎಣಿಸಿ ನೋಡಿದೆ ಹತ್ತು ಪೈಸೆ ಹೆಚ್ಚಾಗಿಯೇ ಕೊಟ್ಟಿದ್ದಾನೆ. ಮತ್ತೊಮ್ಮೆ ನಿಧಾನವಾಗಿ ಎಣಿಸಿದೆ. ಹತ್ತು, ಇಪ್ಪತ್ತು, ಮೂವತ್ತು, ನಲವತ್ತು, ಐವತ್ತು, ಎಪ್ಪತ್ತು, ಎಂಭತ್ತು, ತೊಂಭತ್ತು, ನೂರು. ಇನ್ನು ಹತ್ತು ಪೈಸೆ ಕೈಯಲ್ಲಿ, ಮನ ಕ್ರೈಮ್ ಗೆ ಸಿದ್ದವಾಗಿತ್ತು. ಉಳಿದ ಹತ್ತು ಪೈಸೆ ಜೇಬಿಗೆ ಇಳಿಬಿಟ್ಟೆ!  ಮೊದಲ ಕ್ರೈಮು, ಎದೆ ಢವಗುಟ್ಟುತ್ತಿತ್ತು, ಮನ ಹತ್ತು ಪೈಸೆಗೆ ಏನು ಕೊಂಡುಕೊಳ್ಳುವುದೆಂಬ ಲೆಕ್ಕಾಚಾರದಲ್ಲಿ ತೊಡಗಿತ್ತು!  ಮನೆಗೆ ಬಂದವನೆ ಅಣ್ಣನಿಗೆ ಅಂಗಡಿಯವ ಕೊಟ್ಟ ಚಿಲ್ಲರೆ ಕೊಟ್ಟೆ, ಅಣ್ಣ ಎಣಿಸಿದ ಹತ್ತು ಪೈಸೆ ಕಡಿಮೆ ಬರುತ್ತಿದೆ, ಮನದಲ್ಲಿ ಭಯ ಹೆಚ್ಚಾಯಿತು, ಅಣ್ಣ ಇನ್ನು ಹತ್ತು ಪೈಸೆ ಎಲ್ಲೆಂದ, ಅಂಗಡಿಯವನು ಕೊಟ್ಟಿದ್ದೆ ಅಷ್ಟೆಂದೆ, ಅಂಗಡಿಯವನ ಮೇಲೆ ತಪ್ಪು ಸದ್ದಿಲ್ಲದೆ ಹೋಗಿತ್ತು. ಅಣ್ಣ ಅಷ್ಟಕ್ಕೆ ಬಿಡಲಿಲ್ಲ, ನಡಿ ವಿಚಾರಿಸಿ ಬರುವ ಎಂದ,  ನನ್ನ ಕರೆದುಕೊಂಡು ಹೊರಟ. ಭಯ ದುಪ್ಪಟ್ಟಾಯಿತು, ನನ್ನ ತಪ್ಪು ಸಿಕ್ಕಿಬಿದ್ದರೆ? ಅಂಗಡಿಯವನು ನಾನು ಸರಿಯಾದ ಚಿಲ್ಲರೆಯನ್ನೇ ಕೊಟ್ಟಿದ್ದೇನೆ, ಎಲ್ಲೊ ದಾರಿಯಲ್ಲಿ ಬೀಳಿಸಿಕೊಂಡಿರಬೇಕು ಎಂದ. ಚಡ್ಡಿಯಲ್ಲಿದ್ದ ಹತ್ತು ಪೈಸೆ ಭಾರವಾಗತೊಡಗಿತು. ದಾರಿಯುದ್ದಕ್ಕೂ ಹತ್ತು ಪೈಸೆಯ ಹುಡುಕಾಟ. ನನ್ನ ಮನ ಗಲಿಬಿಲಿಗೊಂಡಿತ್ತು, ತಪ್ಪು ಒಪ್ಪಿಕೊಳ್ಳಲು ಭಯವಾಗುತ್ತಿತ್ತು. ನನ್ನ ಕಣ್ಣಿನಲ್ಲಿದ್ದ ಭಯ ಅಣ್ಣನಿಗೆ ಗೊತ್ತಾಯಿತೆಂದು ತೋರುತ್ತದೆ. ನನ್ನ ಜೇಬಿನಿಂದ ಹತ್ತು ಪೈಸೆ ಕೈಹಾಕಿ ಹೊರತೆಗೆದ. ನನ್ನ ಭಯ ಅಳುವಾಗಿ ಮಾರ್ಪಟ್ಟಿತು. ಅತ ಹತ್ತು ಪೈಸೆ ನನ್ನ ಕೈಲಿರಿಸಿ, ಹೇಳಿದ ಆ ಮಾತು ಇಂದಿಗೂ ನೆನಪಿದೆ "ನನ್ನ ಕೇಳಿದ್ದರೆ ನಾನೇ ಕೊಡುತ್ತಿದ್ದೆ, ಇನ್ಮುಂದೆ ಹೀಗೆ ಮಾಡಬೇಡ". ಅವಮಾನದಿಂದ ಏರಿಗೂ ಮುಖತೋರಲಾಗದೆ, ಆ ಸಣ್ಣಹಾಲಿನಲ್ಲಿ ಅಲ್ಲೇ ಹಾಸಿದ್ದ ಚಾಪೆಯ ಮೇಲೆ ಬೋರಲು ಮಲಗಿ ಮುಖಮುಚ್ಚಿ ಅಳಲಾರಂಬಿಸಿದೆ.  ಹತ್ತರ ಅಂಕೆ, ಅಣ್ಣ ನಿನ್ನ ಮೇಲೆ ಇಟ್ಟಿದ್ದ ನಂಬಿಕೆಗಿಂತ ನಾ ದೊಡ್ಡವನಲ್ಲ ಎಂಬಂತೆ ನನ್ನಂತೆ ಬೆಲೆಕಳೆದುಕೊಂಡು ಇಬ್ಬರಿಗೂ ಬೇಡವಾಗಿ ತಲೆಕೆಳಗಾಗಿ ಬಿದ್ದಿತ್ತು!

ಅಂದು ಬೇಡವಾದ ಹಣ, ನನ್ನ ಜೀವನದಲ್ಲಿ ಮುಂದೆಂದೂ ಮುಖ್ಯವೆನಿಸಲ್ಲಿಲ್ಲ! ಬಾಲ್ಯದಲ್ಲಿ ಉಳಿದ ಮಕ್ಕಳಿಗಿದ್ದಂತೆ, ಆ ವಸ್ತು, ಈ ವಸ್ತು ಬೇಕೆಂಬ ಆಸೆಯಿರಲ್ಲಿಲ್ಲ! ಗೆಳೆಯರೊಡನೆ ಆಟ, ಶಾಲೆಯಲ್ಲಿ ಪಾಠ, ಹಾವ್ಯಸಕ್ಕೊಂದು ಕಾಮಿಕ್ಸ್, ಕಥೆಪುಸ್ತಕ, ಅಮ್ಮ, ಅಕ್ಕಅಣ್ಣಂದಿರ ಮುದ್ದು, ತಂಗಿಯೊಂದಿಗೆ ಕೀಟಲೆ, ಅಪ್ಪ ಅಗಾಗ ತರುತ್ತಿದ್ದ ತಿಂಡಿ, ಅದನ್ನು ಹಂಚಿ ತಿನ್ನುತ್ತಿದ್ದ ರೀತಿ, ತಂಗಿಗೆ ಯಾಮಾರಿಸಿ ಅವಳ ತಿಂಡಿಯನ್ನು ಕಬಳಿಸುವ ಘಟನೆಗಳ ಮಧ್ಯೆ ನನ್ನ ಬಾಲ್ಯ ರೋಚನೀಯವಾಗಿತ್ತು!

ಪ್ರೈಮರಿ ಶಾಲೆ ಮುಗಿಸಿ, ಬೇಸಿಗೆ ರಜೆಯಲ್ಲಿದ್ದೆ ಅಪ್ಪ ಅದೊಂದು ದಿನ ಹೇಳಿದರು, ರಜೆಯಲ್ಲವ ನನ್ನೊಂದಿಗೆ ಕೆಲಸಕ್ಕೆ ಬಾ ಎಂದು. ಅಪ್ಪ ಅಡಿಗೆಯ ಕೆಲಸ ಮಾಡುತ್ತಿರುವರೆಂಬ ಮಾಹಿತಿ ಬಿಟ್ಟರೆ ಅವರ ಕೆಲಸದ ಬಗ್ಗೆ ಇನ್ನೇನೂ ಅರಿವಿರಲಿಲ್ಲ. ನಿರಾಕರಿಸುವ ಮನಸಾಗದೆ ಅವರೊಂದಿಗೆ ಹೊರಟೆ. ಅಲ್ಲಿಗೆ ಹೋದ ಮೇಲೆ ತಿಳಿಯಿತು, ಪ್ಯಾಂಟ್ ಷರ್ಟ್ ಕಳಚಿ ಬರೀಯೇ ಪಂಚೆಯಲ್ಲಿ ಕೆಲಸ ಮಾಡಬೇಕೆಂದು. ಎನೋ ಮುಜುಗರ, ಗುರುತಿರುವರು ಯಾರಾದರು ಗಮನಿಸಿಯಾರು ಎಂಬ ಆತಂಕ. ಕೆಲಸ ಮುಗಿಸಿ ಮನೆ ಸೇರಿದರೆ ಸಾಕೆಂಬ ಅವಸರ! ಇದು ಇಷ್ಟಕ್ಕೆ ನಿಲ್ಲಲಿಲ್ಲ. ಅಪ್ಪ ಮತ್ತೊಮ್ಮೆ ಕರೆದರು, ನಾನು ಬರುವುದಿಲ್ಲವೆಂದೆ. ಏನನಿಸಿತೋ ಹೊರಟುಹೋದರು. ಇನ್ನೊಮ್ಮೆ ಸಹಾಯಕ ಕೆಲಸಗಾರರಾರು ಸಿಗಲಿಲ್ಲ. ಅನಿವಾರ್ಯವಾಗಿ ಹೋಗಲೇಬೇಕಾಯ್ರು. ಹೀಗೆ ಅಗೊಮ್ಮೆ ಈಗೊಮ್ಮೆ ಅವರೊಂದಿಗೆ ಮನಸಿಲ್ಲದ ಮನಸ್ಸಿನಿಂದ ಹೋಗುತ್ತಲ್ಲಿದ್ದೆ. ರಜೆ ಮುಗಿಯಿತು, ಶಾಲಾದಿನಗಳು ಪ್ರಾರಂಭಗೊಂಡವು. ಅಪ್ಪ ರಜೆಯ ದಿನಗಳಲ್ಲಿ ಸಹಾಯಕ ಕೆಲಸಗಾರರು ಸಿಗದ ಸಂಧರ್ಭದಲ್ಲಿ ಕೆಲಸಕ್ಕೆ ಕರೆಯುತ್ತಿದ್ದರು. ಒಮ್ಮೆ ಖಡಾಖಂಡಿತವಾಗಿ ಹೇಳಿಯುಬಿಟ್ಟೆ, ನನ್ನನ್ನು ಕರೆಯಬೇಡಿ, ನನ್ನ ಶಾಲಾಗೆಳೆಯರು ನೋಡಿದರೆ ಅವಮಾನ, ನಾನು ಬರುವುದಿಲ್ಲ! ಅಪ್ಪ ಒಮ್ಮೆಲೆ ಕೋಪಗೊಂಡರು, ಯಾವ ಕೆಲಸವು ಕೇವಲವಲ್ಲ, ನಿಮ್ಮನ್ನು ಇಷ್ಟು ದಿನ ಸಾಕಿದ್ದು ಈ ಕೆಲಸವೇ ಎಂದು, ಆಗ ಅ ಮಾತುಗಳ ತೀಕ್ಷ್ಣತೆ ಅರಿವಾಗಲಿಲ್ಲ, ಅವರ ಮನದಾಳದ ನೋವನ್ನು ಅರ್ಥಮಾಡಿಕೊಳ್ಳುವ ತಾಳ್ಮೆ ಇರಲಿಲ್ಲ. ಅವರ ಕೋಪವೊಂದೇ ಪರಿಚಯವಿದ್ದ ನನಗೆ ಅದನ್ನೂ ಕೋಪವೆಂದೇ ತಿಳಿದೆ, ಮುಂದೊಂದು ದಿನ ಆ ಮಾತಿನ ಸಂಪೂರ್ಣ ಅರ್ಥವಾಗಿತ್ತು.

ಅಪ್ಪ ಬಡತನದಲ್ಲೇ ಬೆಳೆದವರು, ತಾತನಿಗೆ ಮಾತಿಲ್ಲ, ಎಲ್ಲಾ ಕೆಲಸವನ್ನು ಅಜ್ಜಿಯೇ ಮಾಡುತ್ತಿದ್ದರು, ತಾತನಿಗೆ ಮೂರು ಜನ ಮಕ್ಕಳು, ಇವರು ಮಧ್ಯದವರು, ಒಬ್ಬ ಅಕ್ಕ, ಒಬ್ಬ ತಮ್ಮ. ದೂರದ ಕಾಡಿಗೆ, ಅಮ್ಮನೊಂದಿಗೆ ಹೋಗಿ ಮರದ ರೆಂಬೆಕೊಂಬೆಗಳನ್ನು ಆರಿಸಿ, ಅದನ್ನು ಮಾರಿ ಬಂದ ಹಣದಲ್ಲಿ ಜೀವನ. ಬಾಲ್ಯದಲ್ಲೇ ಅಪ್ಪ, ಅಮ್ಮನ ಕಳೆದುಕೊಂಡ, ನಂತರ ನಡೆಸಿದ ಜೀವನ ನನ್ನ ಊಹೆಗೆ ಮೀರಿದ್ದು!

ಅಪ್ಪ ಬೆಂಗಳೂರಿಗೆ ಬರುವ ಮುಂಚೆ, ಶೃಂಗೇರಿ ಯಲ್ಲಿ ಸಣ್ಣ ಹೋಟೆಲ್ ಒಂದನ್ನು ನಡೆಸುತ್ತಿದ್ದರಂತೆ, ಅಲ್ಲಿ ಮನಸ್ತಾಪವಾಗಿ, ಯಾವುದೊ ಕಾರಣಕ್ಕೆ ಕೋಪಗೊಂಡು ಮೊದಲೇ ಕೋಪಿಷ್ಟರಾದ ಅಪ್ಪ ಹೋಟಲ್ ಉದ್ಯಮ ಬಿಟ್ಟು, ಬೆಂಗಳೂರಿಗೆ ಬಂದು ನೆಲೆಸಿದರು. ಅಡಿಗೆ ಕೆಲಸವನ್ನು ವೃತ್ತಿಯಾಗಿ ಆಯ್ದುಕೊಳ್ಳುವ ಮುನ್ನ ಒಂದೆರಡು ವೃತ್ತಿಯಲ್ಲಿ ಕೈಯಾಡಿಸಿ, ನಂತರ ಇದೇ ಕೆಲಸವನನ್ನು ಖಾಯಂಮಾಡಿಕೊಂಡರು.

ಅಮ್ಮ ಕಾಣದ ಲೋಕಕ್ಕೆ ಹೊರಟುಹೋಗಿದ್ದರು, ಅಣ್ಣನಿಗೆ, ಅಕ್ಕತಂಗಿಯರಿಗೆ ಮದುವೆಯಾಗಿತ್ತು. ಮನೆಯಲ್ಲಿ ಯಾವುದೋ ಮನಸ್ತಾಪದಿಂದ ಮನೆ ತೊರೆಯಬೇಕಾಗಿ ಬಂತು. ನನಗಿದ್ದದ್ದು ಸಣ್ಣ ಖಾಸಗಿ ಕಂಪನಿಯಲ್ಲಿ ಕೆಲಸ, ಸಂಬಳ ಅಷ್ಟಕಷ್ಟೆ. ಅಪ್ಪ ನನ್ನೊಂದಿಗೆ ಹೊರಟರು, ಅಣ್ಣನಿಗೆ ಕೊಟ್ಟ ಕಾರಣ "ಅನುಕೂಲ ಮಾಡಿಕೊಡಲು ಸ್ವಲ್ವದಿನ ಅವನೊಂದಿಗೆ ಇರುವೆನೆಂದು". ಅದರೆ ಅವರ ಆ ತೀರ್ಮಾನ ಮಗನ ಮೇಲಿನ ಕಾಳಜಿಯಾಗಿತ್ತು, ಆಗಾಗಲೇ ಮಗನಾಗಬೇಕಿದ್ದ ನಾನು, ಅವರಿಗೆ ಇನ್ನೂ ಮಗುವಾಗಿಯೇ ಉಳಿದ್ದಿದ್ದೆ.

ಅಲ್ಲಿಂದ ಅಪ್ಪ ನನಗೆ ಅರ್ಥವಾಗುತ್ತಾ ಹೊರಟರು, ಅವರ ಕೋಪ, ನೋವು, ಮುನಿಸು, ಪ್ರೀತಿ, ಕಾಳಜಿ ಎಲ್ಲವನ್ನು ಹತ್ತಿರದಿಂದ ಅನುಭವಿಸಿದೆ. ಅವರು ಯಾವುದೇ ನೋವನ್ನು ಯಾರೊಂದಿಗೂ ತೋಡಿಕೊಂಡವರಲ್ಲ, ನನಗೆ ಕಷ್ಟವಿದೆ ಎಂದು ಸುಮ್ಮನೆ ಕುಳಿತುಕೊಂಡವರಲ್ಲ. ಯಾವ ಕೆಲಸವನ್ನು ಯಕಶ್ಚಿತ್ ಎಂದು ಪರಿಗಣಿಸಿದವರೂ ಅಲ್ಲ. ಶಕ್ತಿಯಿರುವವರೆಗೂ ಕೆಲಸಮಾಡುತ್ತಿರಬೇಕೆಂಬ ಬಯಕೆ. ನನ್ನ ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ಎಪ್ಪತ್ತರ ಹರೆಯದಲ್ಲೂ ಅಪ್ಪ, ಶಕ್ತಿ ಇಲ್ಲದಿದ್ದರೂ ಶಕ್ತಿ ಮೀರಿ ದುಡಿಯುತ್ತಿದ್ದರು. ಎಷ್ಟು ಬೇಡವೆಂದರೂ ಕೇಳುತ್ತಿರಲಿಲ್ಲ, ದೇಹ ಸಹಕರಿಸದಿದ್ದರೂ, ಬರಿಯೇ ಅವರ ಉಮೇದನ್ನು ನಂಬಿ ಕೆಲಸಮಾಡುತ್ತಿದ್ದರು.

ನನ್ನ ವಿದ್ಯೆಯ ಮೇಲೆ ಸಾಕಷ್ಟು ಸುರಿದಿದ್ದರು. ವಿದ್ಯೆಯ ಮೇಲೆ ಸುರಿದ ಹಣ ಎಲ್ಲೂ ವ್ಯರ್ಥವಾಗುವುದಿಲ್ಲವೆಂದು!  ನಾನು ಕಂಪ್ಯೂಟರ್ ತರಬೇತಿಗೆ ಸೇರುವನೆಂದಾಗ ಎಲ್ಲಿಯೋ ಸಾಲ ಮಾಡಿ ಹಣ ತಂದಿದ್ದರು, ಅದು ಸಾಲದೆಂಬಂತೆ ನಾನು ಎಂಸಿಎ ಮಾಡುವೆನೆಂದಾಗ, ಅದಕ್ಕೊಂದಿಷ್ಟು ಹಣ ಹೊಂದಿಸಿದ್ದರು. ನನ್ನ ಮೊದಲ ಕೆಲಸಕ್ಕೆ ಬೈಕಿನ ಅವಶ್ಯಕತೆ ಇದೆ ಎಂದಾಗ, ಪ್ರಾರಂಭಿಕ ಕಂತಿಗೆ ಅವರೇ ಹಣ ಒದಗಿಸಿದ್ದರು. ಎಂದೊ ಒಂದು ದಿನ ಮಗು, ಮಗನಾಗಬಹುದೆಂಬ ಉಮೇದಿನಿಂದ, ಒಂದು ಸಣ್ಣ ಆಸೆಯಿಂದ.

ಅದೊಂದು ದಿನ ನನ್ನ ಅದೃಷ್ಟದ ದಿನ, ದೊಡ್ಡ ಖಾಸಗಿ ಕಂಪನಿಯಲ್ಲಿ ಕೆಲಸ. ಅಪ್ಪನ ಮುಖದಲ್ಲಿ ಅಷ್ಟೊಂದು ಸಂತಸವನ್ನು ಮೊದಲಬಾರಿಗೆ ಕಂಡಿದ್ದೆ. ಅಕ್ಕನಿಗೆ ಫ಼ೋನ್ ಮಾಡಿ, ಅರ್ಧ ಲಕ್ಷ ಸಂಬಳವಂತೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಅದಾದ ಕೆಲವೇ ದಿನಗಳಲ್ಲಿ, ನನ್ನ ಅಪ್ಪನ ತಮ್ಮ, ನನ್ನ ಚಿಕ್ಕಪ್ಪ ತೀರಿಕೊಂಡರು, ಅದನ್ನು ಮನಸ್ಸಿಗೆ ಬಹಳವಾಗಿಯೇ ತೆಗೆದುಕೊಂಡುಬಿಟ್ಟರು.  ಅವರಿಬ್ಬರ ನಡುವಿನ ಅನ್ಯೋನ್ಯತೆ ನಮ್ಮ ಕಣ್ಣಿಗೆ ಕಾಣದಂತಹುದು. ಆ ಅನ್ಯೋನ್ಯತೆ ಬರುವುದು ಮನಸ್ಸಿನ ನೋವನ್ನು ಒಬ್ಬರಿಗೊಬ್ಬರು ಹಂಚಿಕೊಂಡಾಗ. ನಮ್ಮ ಯಾರ ಬಳಿಯು ಹಂಚಿಕೊಳ್ಳದ ನೋವನ್ನು ಅಪ್ಪ ತಮ್ಮನ ಬಳಿ ಹಂಚಿಕೊಳ್ಳುತ್ತಿದ್ದರೇನೋ?

ಅಂದು ಮುಂಜಾನೆಯ ಶಿಪ್ಟ್ ಗೆ ರೆಡಿಯಾಗಲು ಬೆಳಿಗ್ಗೆ ಬೇಗನೆ ಎದ್ದೆ. ಮುಂಜಾನೆ ನಾಲ್ಕಿರಬಹುದು. ಅಪ್ಪ ಅಸಹಾಯಕ ಸ್ಥಿತಿಯಲ್ಲಿ ಮಂಚದ ಮೇಲೆ ಕುಳಿತ್ತಿದ್ದರು, ಅವರು ತೆಗೆದುಕೊಳ್ಳಬೇಕಾದ ಮಾತ್ರೆ ಮಂಚದ ಕೆಳಗೆ ಬಿದ್ದಿತ್ತು. ಅವರನ್ನು ಹಾಗೆಯೇ ಎದೆಗೊರಗಿಸಿಕೊಂಡೆ ಮಾತ್ರೆ ನೀಡಿ ನೀರ ಕುಡಿಸಿದೆ. ಹೊರ ಹೋಗಿ ಆಟೊ ತಂದೆ. ಯಾವಾಗಲೂ ತೋರಿಸುವ ಜಯದೇವ ಆಸ್ಪತ್ರೆಗೆ ಹೋದಾಗ, ಪರಿಶೀಲನೆ ಮಾಡಿದ ವೈದ್ಯರು,  ಕಿಡ್ನಿಯ ತೊಂದರೆ, ಸೈಂಟ್ ಜಾನ್ಸ್ ಗೆ ಕರೆದುಕೊಂಡು ಹೋಗಲು ಹೇಳಿದರು. ಸೈಂಟ್ ಜಾನ್ಸ್ ನಲ್ಲಿ ಯಾವುದೇ ಬೆಡ್ ಇರಲಿಲ್ಲ, ಬೆಡ್ ಖಾಲಿಯಾದೊಡನೆ ಬೆಡ್ ಒದಗಿಸುವುದಾಗಿ ಹೇಳಿದ ವೈದ್ಯರು ತಾತ್ಕಾಲಿಕ ಬೆಡ್ ಒದಗಿಸಿ ಪರೀಷಿಸತೊಡಗಿದರು, ಮಡದಿಯನ್ನು ಅಲ್ಲೆ ಬಿಟ್ಟು ಅವರ ಬಟ್ಟೆಗಳನ್ನು ತರಲು ಮನೆಯ ಕಡೆಗೆ ಹೊರಟೆ. ಮನೆಗೆ ಬಂದೊಡನೆ ಸ್ನಾನ ಮುಗಿಸಿ ದೇವರಿಗೆ ದೀಪ ಹಚ್ಚಿ "ದೇವರೇ ತಂದೆಗೆ ಏನೂ ಆಗದಿರಲಿ, ಗುಣವಾಗಿ ವಾಪಸ್ ಬರಲಿ" ಎಂದು ತಪ್ಪುಕಾಣಿಕೆಯೊಪ್ಪಿಸಿದಾಗ ಕಣ್ಣು ಹನಿಗೂಡಿತ್ತು.

ಅವರ ಬಟ್ಟೆಗಳನ್ನು ತೆಗೆದುಕೊಂಡು ಅರ್ಧ ದೂರ ಕ್ರಮಿಸಿದೊಡನೆ, ಮಡದಿಯ ಕರೆ. ದೇವರೇ ತಂದೆಗೆ ಏನೂ ಆಗದಿರಲಿ, ಎಂದು ಕರೆಯನ್ನು ಸ್ವೀಕರಿಸಿದಾಗ, ತಂದೆಯ ಮರಣದ ಸುದ್ದಿ, ದೇಹದ ಸಮತೋಲನವನ್ನೊಮ್ಮೆ ಅಲುಗಾಡಿಸಿತು, ಏನು ಮಾಡಬೇಕೆಂದು ತೋರಲಿಲ್ಲ, ದಾರಿಹೋಕರು ಗಮನಿಸುತ್ತದ್ದಾರೆಂಬ ಪರಿವೆಯೂ ಇಲ್ಲದೆ ಕಣ್ಣಿಂದ ಕಣ್ಣೀರ ಹನಿ ಸುರಿಯುತ್ತಿತ್ತು. ಸಾವರಿಸಿಕೊಂಡು ಅಸ್ಪತ್ರೆ ಸೇರಿದಾಗ, ತಂದೆಯ ದೇಹ ಡಿಸ್ಚಾರ್ಜ್ ಗೆ ಕಾಯುತ್ತಿತ್ತು. ತಂದೆಯ ದೇಹವನ್ನು ನೋಡಿದಾಗ ದುಃಖ ಉಮ್ಮಳಿಸಿ ಬಂತು, ಅವರಿಲ್ಲ ಎಂಬ ಸತ್ಯವನ್ನು ಅರಿಗಿಸಿಕೊಳ್ಳಲಾಗುತ್ತಿರಲಿಲ್ಲ. ಮಗನಾಗಿ ಸಾಯುವ ಘಳಿಗೆ ಅವರ ಬಳಿ ಇರಲಿಲ್ಲವೆಂಬ ನೋವು ಒಂದೆಡೆಯಾದರೆ, ಹೆಂಡತಿಯ ಬಳಿ ತಂದೆಯಾಡಿದ ಕೊನೆಯ ಮಾತು "ಅವನ್ನೆಲ್ಲಿ ಹೋದ, ಅವನನ್ನು ಕರಿ" ಎಂಬ ಮಾತು ಕೆನ್ನೆಗ್ಯಾರೋ ಬಾರಿಸಿದಂತಾಯ್ತು!

ನನ್ನ ಬಾಲ್ಯದ ದಿನಗಳಲ್ಲಿ ನಮಗೆ ಕಾಣದಂತೆ, ಬಡತನದಲ್ಲಿ, ನಮಗೆ ಬಡತನದ ಅರಿವೆ ಇಲ್ಲದಂತೆ, ಬಾಲ್ಯಕ್ಕೊಂದು ಭದ್ರಬುನಾದಿಯಾಗಿದ್ದ ಅಪ್ಪ, ಕಾಯಕವೇ ಕೈಲಾಸ, ಕೆಲಸ ಯಾವುದಾದರೇನು ಎಂಬ ತಿಳುವಳಿಕೆ ನೀಡಿದ ಅಪ್ಪ, ನನ್ನ ಕಷ್ಟದ ದಿನಗಳಲ್ಲಿ, ನಿನ್ನ ಜೊತೆ ನಾನಿದ್ದೇನೆ ಎಂದು ಈ ಮಗುವೊಂದಿಗೆ ಇದ್ದ ಅಪ್ಪ, ಸುಖ ಸಮೀಪಿಸುತ್ತಿರುವಾಗ ಸುಖವಾಗಿ ನೋಡಿಕೊಳ್ಳಬೇಕೆಂದುಕೊಂಡಾಗ ಅ ಕಷ್ಟದಲ್ಲಿ ನೆರವಾಗಿದ್ದ ಅಪ್ಪ ಇರಲಿಲ್ಲ. ನನ್ನ ಪ್ರತಿಯೊಂದು ಕಷ್ಟದ ಸಮಯದಲ್ಲೂ, ಬೆಳೆದ ಮಗನನ್ನು ಮಗುವಂತೆ ಕಂಡು, ಮಗುವಿಗೇನೂ ಗೊತ್ತಾಗದು, ನಾನಿರದಿರೆ ಹೇಗೆ ಜೀವನ ನಡೆಸುವನೋ ಎಂಬ ಯೋಚನೆ ಮಾಡುತ್ತಿದ್ದ ಅಪ್ಪ ಇನ್ನಿಲ್ಲ, ಅವರ ಕನಸಿನ ಮನೆಯೊಂದನ್ನು ಮಾಡಿ ಅವರ ಸಂತಸವನ್ನೊಮ್ಮೆ ನೋಡಬೇಕೆಂದಾಗ ಅಪ್ಪ ಇರಲಿಲ್ಲ. ಅವರ ಕಣ್ಣಿನಲ್ಲಿ ಮಗುವಾಗಿಯೇ ಇದ್ದ ನಾನು, ಮಗನಾಗಬೇಕೆಂದುಕೊಂಡಾಗ ಅಪ್ಪ ಇರಲಿಲ್ಲ.

ಅಪ್ಪ ಇನ್ನು ಬೇಕೆನಿಸುತ್ತಿದ್ದರು. ಅವರ ಜೊತೆಗಿನ ಒಂದೊಂದು ಘಟನೆಯು ದುಃಖ ಉಮ್ಮಳಿಸಿ ಬರುವಂತೆ ಮಾಡುತ್ತಿದ್ದವು, ಯಾಕೋ ಸಂಪೂರ್ಣ ಅನಾಥನಾದೆಯೆನಿಸಿತು. ತಂದೆಯ ದೇಹವನ್ನೊಮ್ಮೆ ತಬ್ಬಿ ಮನಬಿಚ್ಚಿ ಅಳಬೇಕೆನಿಸಿತು.

ಮನುಜ ಬರುವಾಗ ನೀ ಬಂದಿರುವುದು ಬೆತ್ತಲೆ!
ನಿನಗರಿವುಂಟು ನೀ ಹೋಗುವುದು ಬೆತ್ತಲೆ!
ಅ ಬೆತ್ತಲೆ, ಈ ಬೆತ್ತಲೆಗಳ ನಡುವಿನ ಜೀವನ!
ಆ ದೇವ ನೀಡಿದವಕಾಶ, ಮಾಡಿಕೊ ಪಾಪಕರ್ಮಗಳ ವಿಮೋಚನ!

ಈ ಜಗವೊಂದು ಬರೀಯೆ ನಾಟಕರಂಗ!
ಎನಿಲ್ಲವಿಲ್ಲಿ ಇದು ಬರಿಯೇ ಪಾತ್ರಧಾರಿಗಳ ಸಂಗ!
ನೀನಾಡುವ ಆಟದ ಮೇಲೆ, ಎದುರಿನ ಪಾತ್ರದಾಟ!
ಬಯಸುವೆಯೇನೊ ಎದುರಿನ ಪಾತ್ರದಿಂದ, ಆಡು ಅದೇ ಪಾತ್ರದಾಟ!

ತಂದೆಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಾಗ, ಏವಾಗಲೂ ಎದುರಾಗುತ್ತಿದ್ದ ಅಪ್ಪ ಇರಲಿಲ್ಲ.  ನನ್ನ ಒಂದೂವರೆ ವರ್ಷದ ಮಗ ಓಡುತ್ತಾ ಬಂದು ನನ್ನ ತೋಳೆರುವಾಗ ಅವನು ಅಪ್ಪ ಎಂದನೊ, ಮಗನೇ ಎಂದನೊ ಅರಿಯದಾದೆ, ಅತನ ಗಲ್ಲಕ್ಕೊಂದು ಮುತ್ತನ್ನಿತ್ತು, ಎದೆಗೊರಿಸಿಕೊಂಡಾಗ ಜಾರಿದ ಕಣ್ಣೀರ ಹನಿ, ಸಮಾಧಾನದ ಹನಿಯಾಗಿತ್ತು.

ಜನನ ಮರಣದೊಳಗೊ, ಮರಣ ಜನನದೊಳಗೊ,
ಜನನ ಮರಣಗಳೆರಡು ನಿನ್ನೊಳಗೊ!Comments

 1. ಹತ್ತರ ಅಂಕೆ, ಅಣ್ಣ ನಿನ್ನ ಮೇಲೆ ಇಟ್ಟಿದ್ದ ನಂಬಿಕೆಗಿಂತ ನಾ ದೊಡ್ಡವನಲ್ಲ ಎಂಬಂತೆ ನನ್ನಂತೆ ಬೆಲೆಕಳೆದುಕೊಂಡು ಇಬ್ಬರಿಗೂ ಬೇಡವಾಗಿ ತಲೆಕೆಳಗಾಗಿ ಬಿದ್ದಿತ್ತು! (wonderful lines)


  ಅಬ್ಬಬ್ಬಾ.. ಶಂಕರ್ ಗುರು ಚಿತ್ರದಲ್ಲಿ ಅಣ್ಣಾವ್ರು "ಚೆಲುವೆಯ ನೋಟ ಚೆನ್ನಾ" ಈ ಹಾಡನ್ನು ದೂರವಾಣಿ ಮೂಲಕ ತನ್ನ ಮಡದಿಯ ಜೊತೆಯಲ್ಲಿ ಮಾತಾಡುವಾಗ ಹೇಳುವ ಮಾತು..

  ನಿನ್ನ ಬ್ಲಾಗ್ ನೋಡಿದಾಗ.. ಎಂದೂ ಅಳಲು ಒಪ್ಪದ ಮನಸ್ಸು ಶ್ರೀ.. ಒಂದು ಹನಿ ಕಣ್ಣ ಬಿಂದು ಈ ಲೇಖನಕ್ಕೆ ನೀ ಕೊಡುವ ಗೌರವ ಎಂದಿತು.

  ಏನು ಹೇಳಲಿ ಅಪ್ಪ ಎನ್ನುವ ಶಕ್ತಿಯನ್ನು ಕಳೆದುಕೊಳ್ಳುವುದು, ಆಮೇಲೆ ಆ ಶಕ್ತಿ ನಿಧಾನವಾಗಿ ನಮ್ಮ ದೇಹವನ್ನು ತುಂಬಿ ನಿಲ್ಲುವುದು ಅಕ್ಷರಶಃ ಅನುಭವಿಸುವುದು ಒಂದು ಅದ್ಭುತ ಅನುಭವ..

  ಬಾಲ್ಯವನ್ನ ಹರಿಯಬಿಟ್ಟು , ಭಾವವನ್ನು ತೇಲಿಸಿ, ಭಾವುಕತೆಯ ಎಲ್ಲೇ ದಾಟದೇ ಅದ್ಭುತವಾಗಿ ಮೂಡಿಬಂದ ಮನದಾಳದ ಮಾತುಗಳಿಗೆ ಸಲಾಂ ಗುರು..

  ಅಪ್ಪ ಎನ್ನುವ ಆಶಕ್ತಿಯೇ ನಿನ್ನ ಬರವಣಿಗೆಗೆ ಬೆನ್ನುಲುಬಾಗಿ ನಿಂತಿದೆ, ಬಾಲ್ಯದ ತುಂಟತನ, ಅದರಲ್ಲಿ ಕಲಿತ ಪಾಠ, ನಗು ಅಳು ಎಲ್ಲವನ್ನು ಹದವಾಗಿ ಬಡಿಸಿಟ್ಟ ಪರಿಗೆ ಏನು ಹೇಳಲಿ..ನನ್ನ ನಿನ್ನ ಮುಂದಿನ ಭೇಟಿಯಲ್ಲಿ ಒಂದು ಕರಡಿಯಪ್ಪುಗೆ ನಿನಗಾಗಿ ಕಾಯುತ್ತಿರುತ್ತದೆ..

  ಸೂಪರ್ ಎಂದು ಹೇಳಲೇ ಬೇಕು..

  ReplyDelete

Post a Comment

Popular posts from this blog

ನನ್ನ ಸಾಹಿತ್ಯದ ಶ್ರೀಕಾರನ ಸುತ್ತಾ....

ಒಂದು ಮಗುವಿನ ಕಥೆ...

ಗೆಳೆತನದ ಮಿಡಿತ!