ಒಂದು ಮಗುವಿನ ಕಥೆ...

ಬಿತ್ತೊಂದು ಮುದ್ದಿನ ಕೂಸೊಂದು ತೋಳಲ್ಲಿ!
ಇವನಾರೆಂಬ ನೋಟ ಪಿಳಿಪಿಳಿ ಕಂಗಳಲ್ಲಿ!

ರಸಪುರಿ ಮಾವಿನ ಹಣ್ಣಿನ ತುಂಬಿದ ಕೆನ್ನೆ,
ಹಲ್ಲೇ ಇಲ್ಲದ ಇಷ್ಟೆ ಇಷ್ಟು ಪುಟಾಣಿ ಬಾಯಿ!
ಮುಚ್ಚಿದ ಬೆರಳಿನ ಪುಟ್ಟ ಪುಟ್ಟ ಕೈ!
ಬಡಬಡ ಬಡಿಯುವ ಪುಟಾಣಿ ಕಾಲು!

ಮುದ್ದಿಗೇ ಮುದ್ದು ಈ ಪುಟಾಣಿ ಜೀವ!
ಮುಗ್ದತೆ ತುಂಬಿದ ಸುಂದರ ಕಾಯ!
ಹಸಿವಾದರೆ ಅಳುವ, ಕನಸಲಿ ನಗುವ!
ಸುಂದರ ಕಿಶೋರ, ನಮ್ಮನೆ ರಾಯ!

ಮನದಲ್ಲಿ ತಿಳಿಯದ ಸಂತಸ, ಎದೆಗೊರೆಸಿಕೊಳ್ಳಬೇಕೆಂಬ ಬಯಕೆಯನ್ನು, ಸಣ್ಣ ಮಗು ಬಿದ್ದರೆ ಎಂಬ ಭಯದಿಂದ ಹಾಗೆ ಮನದಲ್ಲೇ ಅದುಮಿಟ್ಟುಕೊಂಡೆ! ಹೆಂಡತಿಯ ಮುಖದಲ್ಲಿ ಬಸವಳಿದರೂ, ಮಂದಹಾಸ ಹೊರಹೊಮ್ಮುತ್ತಿತ್ತು!  ಮಗುವಿನ ಪಕ್ಕದಲ್ಲೇ ಇರಬೇಕೆಂದು ಮನ ಬಯಸಿದರೂ, ಇತರ ಕೆಲಸಗಳು ಅದಕ್ಕೆ ಅನುವು ಮಾಡಕೊಡುತ್ತಿರಲ್ಲಿಲ್ಲ!

ಮಗು! ಈ ಪದ ಕೇಳಿದರೆ ಮನಸ್ಸೊಮ್ಮೆ ತಿಳಿಯಾಗುತ್ತದೆ! ಮೊದಲೇ ನನಗೆ ಮಕ್ಕಳೆಂದರೆ ತುಂಬಾ ಇಷ್ಟ, ಅದರಲ್ಲೂ ನನ್ನದೇ ಮಗು, ಆಡಲೊಂದು ಸ್ವಂತ ಆಟಿಕೆ ಸಿಕ್ಕ ಮಗುವಿನಂತಾಗಿತ್ತು ಮನಸ್ಥಿತಿ! ಎಷ್ಟೋ ಬಾರಿ ಯೋಚನೆ ಮಾಡಿದ್ದಿದೆ! ಮಗುವಿನ ಮನಸ್ಸು ಶುಭ್ರವಾದ ಬಿಳಿಯ ಬಣ್ಣದ ವಸ್ತ್ರವಿದ್ದಂತೆ, ಏನೊಂದು ಅರಿಯದ ಅದರ ಮನಸ್ಸು ನಮ್ಮಗಳ ಕೈಯಲ್ಲಿ! ಅದಕ್ಕೆ ಅರಿವಾಗುವುದು ಹಸಿವೊಂದೇ, ಹಾಗೂ ತನ್ನೊಂದಿಗೆ ತರುವ ಆ ಅಳು! ಆ ಹಸಿವೊಂದರ ಆಧಾರದ ಮೇಲೆ, ನಾವು ಆ ಶುಭ್ರ ಬಿಳಿವಸ್ತ್ರವನ್ನು ಬದಲಾಯಿಸುತ್ತಾ ಹೋಗುತ್ತೇವೆ! ಆ ಅಳುವೆಂಬ ಒಂದೇ ಭಾವನೆಗೆ, ನಗು, ಕೋಪ, ಮತ್ಸರ, ಅಸಹ್ಯ ಮುಂತಾದ ಭಾವನೆಯ ಪರಿಚಯ ಮಾಡಿಕೊಡುತ್ತಾ ಹೋಗುತ್ತೇವೆ! ಪ್ರಪಂಚವೆಂಬ ಈ ಗರಡಿಯಲ್ಲಿ ಮನಸ್ಸಿನ ಮತ್ತು ಭಾವಗಳ ತಾಲೀಮು ನಡೆಯುತ್ತಾ ಹೋಗುತ್ತದೆ!

ನನಗೆ ಮಗನನ್ನು ಹೀಗೇಯೇ ಬೆಳೆಸಬೇಕೆಂಬ ಖಯಾಲಿಯಿಲ್ಲ! ಆತ ಹೇಗೆ ಬೆಳೆಯುತ್ತಿದ್ದಾನೆಂದು ನೋಡಿ ಆನಂದಿಸುವ ಬಯಕೆ! ದಾರಿ ತಪ್ಪಿದರೆ, ಸರಿದಾರಿಯ ಮಾರ್ಗದರ್ಶನ! ಅವನ ಆಯ್ಕೆ, ಅವನ ಬಯಕೆ, ಅವನ ಜೀವನ!  ಕಾರಣ ಈ ಗರಡಿಯಲ್ಲಿ ನಾನೊಬ್ಬನೇ ಬೋಧಕನಲ್ಲ, ಆತನ ಜೀವನ ಪಯಣದಲ್ಲಿ,  ಗೆಳೆಯರು, ಶತ್ರುಗಳು, ಸಂಭಂಧಿಕರು, ಹಿತೈಷಿಗಳು, ಹೀಗೆ ನೂರಾರು, ಸಾವಿರಾರು! ಆಯ್ಕೆಯೊಂದರಿತರೆ, ಈ ಜಗದ ಜೀವನ ಅರಿತಂತೆ!

ಹೊಟ್ಟೆಯ ಮೇಲೆ ಮಲಗಲು ಕಲಿತ!
ತೆವಳುವ ಕಲೆಯಲಿ ಬಲುಬೇಗ ನುರಿತ!
ಅಂಬೆಗಾಲಿಕ್ಕುವ  ಆ ಸುಂದರ ದೃಶ್ಯ!
ಕೈಗೆಟಕುವ ವಸ್ತುಗಳೆಲ್ಲಾ ಒಮ್ಮೆಲೆ ಅದೃಶ್ಯ!

ಪುಟ್ಟಪುಟ್ಟ ಹೆಜ್ಜೆಯ ಆ ಗೆಜ್ಜೆಯ ನಾದ!
ಹಿಮ್ಮೇಳಕ್ಕೆ ಆ ತೊದಲು ನುಡಿಯ ವಾದ್ಯ!
ತುಂಟ ಕೃಷ್ಣನಿಗೆ ಆಡಲು, ಅಮ್ಮನೆ ಗೋಪಿಕೆ!
ಯಾವುದೇ ಮಾತಿರಲಿ, ನಮ್ಮಯ ಅತನ ಜಪಿಕೆ!

ಮಗುವಿನ ಪ್ರತಿಯೊಂದು ಬೆಳವಣಿಗೆಯು ಸೋಜಿಗ! ಅಂಬೆಗಾಲಿಕ್ಕುವ ಚಮತ್ಕಾರದಿಂದ ಹಿಡಿದು, ನಡೆಯಲು ಕಲೆಯುವ ಕಲೆಯ ವಿಸ್ಮಯ ಬೆಳವಣಿಗೆ! ಯಾವುದನ್ನು ನಾವು ಕಲಿಸುವುದಿಲ್ಲ, ಬರಿಯೇ ನಮ್ಮ ಸಹಕಾರ ಮಾತ್ರವೇ!  ಆ ಸಹಕಾರ ಮಾತ್ರವನ್ನೇ ನಾನು ಕೊಡಲು ಬಯಸುವುದು! ಆತನು ಬಯಸಿದಷ್ಟು ದಿನ!

ಆತನೊಂದಿಗೆ ನಾವು ಮಗುವಾಗಿ ಆಟವಾಡುವ ಆ ಕ್ಷಣ, ನಿಜವಾಗಲು ಮಗುವಾಗಿರುತ್ತೇವೆ, ಮಗುವಿನ ಮನಸ್ಸಿನ ಸ್ಥಿತಿಗೆ ನಮ್ಮಯ ಮನಸ್ಸನ್ನು ತೆಗೆದುಕೊಂಡು ಹೋಗಿರುತ್ತೇವೆ! ಆಗ ಮಾತ್ರವೇ ನಮ್ಮಯ ಮನಸ್ಸು ಅಷ್ಟೊಂದು ನಿರ್ಮಲವಾಗಿರುವುದು? ನನ್ನ ಮಡದಿ ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದಳು, ನಾನೇನಾದರೂ ಮನನೊಂದಿದ್ದರೆ ಅಥವಾ ಯಾವುದೇ ಒತ್ತಡದಲ್ಲಿದ್ದರೂ ಮಗುವನ್ನು ನನ್ನಯ ಕೈಗೆ ಒಪ್ಪಿಸುತ್ತಿದ್ದಳು! ಚೇತನ ನೀಡುವ ಟಾನಿಕ್ ನ ಹಾಗೆ!

ಅಮ್ಮ ಮಗುವನ್ನು ಸ್ನಾನ ಮಾಡಿಸಿ ಸಿಂಗರಿಸುವ ಪರಿ ನೋಡಲು ಆಹ್ಲಾದವೆನಿಸುತ್ತದೆ! ಮಗುವಿನ ಅಳು, ತಾಯಿಯ ಆ ಹೆಮ್ಮೆಯ ಮಗುವಿನ ಮೇಲಿನ ನೋಟ, ತೀಡಿ ತಿದ್ದುವ ಅಲಂಕಾರ, ಪುಟ್ಟಪುಟ್ಟ ಬಟ್ಟೆಯಲ್ಲಿ ಮಗು ಒಪ್ಪವಾಗುವ ರೀತಿ, ಕೊನೆಗೊಮ್ಮೆ ಮಗುವಿಗೆ ದೃಷ್ಟಿಯಾಗಬಾರದೆಂದು ತೆಗೆಯುವ ನೆಟಿಕೆ, ಕಡೆಗೊಮ್ಮೆ ದೃಷ್ಟಿಯಾಗಿಯೂ ಅಗದಂತೆ ಗಲ್ಲಕ್ಕೊಂದು ಮುತ್ತು!

ಮಗು ನಾವು ಹೇಳಿ ಕಲಿಯುವುದಕ್ಕಿಂತಲೂ, ನೋಡಿ ಬಹುಬೇಗ ಕಲಿಯುತ್ತದೆ! ಒಳ್ಳೆಯ ಗುಣವಿರಲಿ, ಅಥವಾ ಕೆಟ್ಟದ್ದೆ ಇರಲಿ, ಕೆಲವೊಮ್ಮೆ ನಾವು ವಿಸ್ಮಿತವಾಗುವುದ್ದಿದೆ, ನಾವೇನೂ ಹೇಳಿಕೊಡಲಿಲ್ಲ ಆದರೂ ಹೇಗೆ ಕಲಿತದ್ದೆಂದು. ನಾವು ತಿಳಿಯದೆಯೇ ಮಗುವಿನ ಮನಸ್ಸನ್ನು ಗೀಚಿರುತ್ತೇವೆ! ನಮ್ಮ ಮನಸ್ಸಿನ ಕೆಟ್ಟ, ಒಳ್ಳೆಯ ಭಾವವನ್ನು ಮಗುವಿನ ಮನಸ್ಸಲ್ಲಿ ತುಂಬುತ್ತಾ ಹೋಗುತ್ತೇವೆ! ಅವನಿಗೆ ತಿಳಿಯುವಂತೆ, ಪ್ರೀತಿ, ವಾತ್ಸಲ್ಯಗಳ ಅಕ್ಷರಗಳನ್ನು ಮಗುವಿನ ಮನಸ್ಸಿನ ಮೇಲೆ ಬರೆದು ಈ ಪ್ರಪಂಚದ ಮೊದಲ ಮಜಲಿನ ಪರಿಚಯ ಮಾಡಿಕೊಡುತ್ತಾ ಹೋಗುತ್ತೇವೆ!

ಮೊದಲ ದಿನದ ಶಾಲೆಯ ಸಿದ್ದತೆಯ ಕರೆ!
ಸಮವಸ್ತ್ರ, ಬೂಟು, ಪುಟ್ಟ ಬ್ಯಾಗಿನ ಹೊರೆ!
ಹೊರಜಗತ್ತಿನ ಮೊದಲ ಏಕಾಂತ ಪಯಣ!
ಗಾಬರಿಯೊಂದಿಗೆ ಒದ್ದೆಯಾದ ನಯನ!

ಮನೆಯಲಿ ಒಮ್ಮೆಲೆ ನೀರವ ಮೌನ!
ಆಟ, ಆಟಿಕೆ ಮಗುವಿಲ್ಲದೆ ಗೌಣ!
ಸಮಯ ಸರಿಯದೆ ನಿಂತ ಅನುಭವ!
ಕೆಲಸ ಕಾರ್ಯಗಳ ಮೇಲಿನ ನಿರಾಭಾವ!

ಮಗು ಮೊದಲ ದಿನ ಶಾಲೆಗೆ ಹೋದಾಗ ಮನದಲ್ಲಿ ಏನೋ ತಳಮಳ. ಹೊರಜಗತ್ತನ್ನು ಹೇಗೆ ಎದುರಿಸಬಲ್ಲನೆಂಬ ಕುತೂಹಲ. ಕಾಣದಂತೆ ಹೋಗಿ ಅವನನ್ನೆ ಗಮನಿಸುವ ಉತ್ಸಾಹ! ಅದಕ್ಕೆ ತಡೆಹಾಕಿ ಅವನ ಬರುವಿಕೆಯನ್ನು ಕಾಯುವ ಅಸಹಾಯಕ ಸ್ಥಿತಿ.

ಮಗು ಕ್ರಮೇಣ ಜಗತ್ತಿಗೆ ಪರಿಚಯವಾದಂತೆ, ಅವನ ಮನಸ್ಸಿನ ಮೇಲೆ ಬರೆಯುವ ಇತರ ಮನಸ್ಸುಗಳು ಹೆಚ್ಚಾಗುತ್ತವೆ! ಖುಷಿ, ಖಿನ್ನತೆ, ಕೋಪ, ಪ್ರೀತಿ, ವೈರತ್ವಗಳೊಂದಿಗೆ ಪ್ರಪಂಚದ ಮತ್ತೊಂದು ಮಜಲನ್ನು ಪರಿಚಯ ಮಾಡಿಕೊಂಡಿರುತ್ತಾನೆ!  ಮನಸ್ಸಿಗೆ ಹಿತವಾದದ್ದನ್ನು ಆರಿಸುತ್ತಾನೆ, ಕೆಟ್ಟದ್ದು, ಒಳ್ಳೆಯದನ್ನು, ಅವನ ಮನಸ್ಸಿನ ಪ್ರಕಾರ ಸ್ವೀಕರಿಸುತ್ತಾನೆ. ಮತ್ತೊಮ್ಮೆ ಅವನ ಆಯ್ಕೆಯೊಂದೇ ಪ್ರಮುಖವಾಗುತ್ತದೆ! ಸರಿಯಾದ ಮಾರ್ಗದರ್ಶನ ಅನಿವಾರ್ಯವಾಗುತ್ತದೆ!

ಮಗುವಿಗೆ ಹೊರಜಗತ್ತಿನ ಪರಿಚಯವಾದಂತೆ, ಇತರ ಭಾವನೆಗಳ ಪರಿಚಯವಾಗುತ್ತದೆ! ಹಿತವಾದ ಭಾವನೆಗಳಿಗೆ ಮನ ಹಿಗ್ಗುತ್ತದೆ. ಅಹಿತ ಭಾವನೆಗಳು ಮನಸ್ಸನ್ನು ಘಾಸಿಗೊಳಿಸುತ್ತದೆ. ಹಿತ ಭಾವನೆಗಳನ್ನು ಪಡೆಯಲು ಮಾಡುವ ಆತನ  ಪ್ರಯತ್ನಗಳು, ಹೊಸ ಹೊಸ ಕಾರ್ಯಕ್ಕೆ ಮನವನ್ನು ಪ್ರೇರೇಪಿಸುತ್ತದೆ, ತನಗೆ ಗೊತ್ತೊ, ಗೊತ್ತಿಲ್ಲದೆ, ತನ್ನ ಮನಸ್ಸನ್ನು ತಾನೇ ಬರೆಯಲು ಪ್ರಾರಂಭಿಸುತ್ತಾನೆ!

ಮುದ್ದಿನ ಮಗುವು ಈಗ ಮಗನಾದ!
ಅಪ್ಪ ಅಮ್ಮನ ಮುದ್ದಿನ ಸುತನಾದ!
ವಯಸ್ಸೀಗ ಹತ್ತು ಮೇಲೆ ಮತ್ತೊಂದು!
ಅವನ ಚಟುವಟಿಕೆ ಈಗ ಎಷ್ಟೊಂದು!

ಎಲ್ಲಾ ನಿರ್ಧಾರಕ್ಕೂ ಅವನದೊಂದು ಮತ!
ಕೆಲವೊಮ್ಮೆ ಹಠ, ಮಾತು ವಟವಟ!
ನಮ್ಮಿಬ್ಬರ ಮಧ್ಯದ  ಈ ಚಿಕ್ಕ ಆಕೃತಿ!
ಜಯಿಸಬಲ್ಲನೇ ಜಗದ ಈ ವಿಕೃತಿ!

ಎಂದು ತನ್ನ ಮನಸ್ಸನ್ನು ತಾನೇ ಬರೆಯಲು ಪ್ರಾರಂಭ ಮಾಡಿದನೊ ಆತನ ಮನಸ್ಸು ವರ್ಣರಂಜಿತವಾಗುತ್ತಾ ಹೋಯಿತು. ಪ್ರಪಂಚದ ವಿವಿಧ ಬಣ್ಣಗಳನ್ನು ಮನಸ್ಸಿನಲ್ಲಿ ತುಂಬಿಕೊಂಡ. ನನಗೆ ಆತನನ್ನು ಗಮನಿಸುವ ಕೆಲಸ ಇಷ್ಟವಾಗತೊಡಗಿತು!

ಅವನ ಆಸೆ ಆಕಾಂಕ್ಷೆಗಳನ್ನು ಎಂದೂ ಬೇಡ ಎನ್ನುವ ಮನಸ್ಸು ಬಂದಿದ್ದಿಲ್ಲ. ಅವನು ಏನಾದರು ಅಪೇಕ್ಷಿಸಿದಾಗ, ಅವನ ಬಾಲ್ಯದೊಳಗೊಮ್ಮೆ ಹೊಕ್ಕಿ, ಅವನು ಆ ವಸ್ತುವಿನಿಂದ ಎಷ್ಟು ಸಂತೋಷ ಪಡಬಹುದೆಂದು ನೆನೆದು ಅದನ್ನು ಕೊಡಿಸುವ ಉಮೇದು! ಸಣ್ಣ ವಸ್ತುವಿನಿಂದ ಆತ ಅಷ್ಟೊಂದು ಸಂತೋಷ ಪಡುವುದಾದರೆ, ಏಕಾಗಬಾರದು ಎಂಬ ಮನೋಭಾವ ನನ್ನದು.

ಅವನ ಮೊದಲ ಆಯ್ಕೆಯ ಹವ್ಯಾಸ ಚಿತ್ರಕಲೆ. ಮೊದಮೊದಲು ಎಲ್ಲಾ ಮಕ್ಕಳಿಗಿರುವಂತೆ ಇವನಿಗೂ ಅದರ ಪ್ರಾರಂಭಿಕ ಅಸಕ್ತಿ ಎಂದು ಮಾಡಿದ್ದೆ, ನನ್ನ ಬಾಲ್ಯದ ನನ್ನ ಅಸಕ್ತಿಯ ತುಲನೆ ಮಾಡಿದ್ದೆ. ಆದರೆ ಮೂರನೆಯ ವಯಸ್ಸಿಗೆ ರೇಖೆಗಳ ಮೇಲಿನ ಹಿಡಿತ ಒಮ್ಮೆ ಅಚ್ಚರಿಯನ್ನು ಮೂಡಿಸಿತ್ತು. ಕಡೆಗೆ ಹೆತ್ತವರಿಗೆ ಹೆಗ್ಗಣ ಮುದ್ದು ಎಂದು ಸುಮ್ಮನಾದೆ ಆದರೆ ಕಾಲಕ್ರಮೇಣ ಕ್ಲಿಷ್ಟಕರವಾದ ಚಿತ್ರಗಳನ್ನು ಬಿಡಿಸಿದಾಗ ಹಾಗೂ ಚಿತ್ರಕಲೆಯ ಬೇರೆಬೇರೆ ವಿನ್ಯಾಸಗಳ ಆಸಕ್ತಿ ಬೆಳೆಸಿಕೊಂಡಾಗ ವಿಸ್ಮಿತನಾಗಿದ್ದೆ. ಇಂಟರ್ನೆಟ್‌ ಯಾವ ರೀತಿಯಲ್ಲಿ ಸದುಪಯೋಗ ಪಡೆಯುವುದೆಂದು ತನ್ನ ಏಳನೇ ವಯಸ್ಸಿನಲ್ಲಿಯೇ ಕಲಿತುಕೊಂಡಿದ್ದ. ಚಿತ್ರಕಲೆಯ ವಿಧವಿಧವಾದ ರೀತಿಯನ್ನು ಗುರುಗಳ ಸಹಾಯವಿಲ್ಲದೆ ಹಸ್ತಗತ ಮಾಡಿಕೊಂಡಿದ್ದ.

ಎಂದು ಇಂಟರ್ನೆಟ್‌ ನಿಂದ ಏನಾನ್ನಾದರೂ ಕಲಿಯಬಹುದು ಎಂಬ ಮನದಟ್ಟಾಯಿತೊ ನಮ್ಮ ಊಹೆಗೂ ನಿಲುಕದೆ ಅವನ ಆಸಕ್ತಿ ಬೆಳೆಯಿತು. ಮನದ ಮನಸ್ಸಿಗೆ ಮತ್ತೊಂದು ಬಣ್ಣ!  ಆರಿಗಾಮಿ ಎಂಬ ಕಾಗದದಿಂದ ವಿಧವಿಧ ವಿನ್ಯಾಸ ಮಾಡುವ ಕಲೆಯನ್ನು ಕರಗತ ಮಾಡಿಕೊಂಡ. ಕ್ಲಿಷ್ಟಕರವಾದ ವಿನ್ಯಾಸಗಳು. ಬರೀಯೇ ಕಾಗದದಿಂದ ರೂಪತಳೆಯುತ್ತಿದ್ದವು. ಯಾವ ಕಾಗದ ದೊರೆತರೂ ಅದಕ್ಕೊಂದು ರೂಪ ಕೊಡುತ್ತಿದ್ದ.

ಅವನ ಎಂಟನೆಯ ವಯಸ್ಸಿನಲ್ಲಿ ಯಾವುದಾದರು ಮ್ಯುಸಿಕಲ್ ಇನ್ಸ್ಟ್ರುಮೆಂಟ್ಸ್ ಕಲಿಸಬೇಕೆಂದು ನಿಶ್ಚಯಿಸಿದೆವು.  ಅವನ ಆಯ್ಕೆ ಗಿಟಾರ್. ಏಳೆಂಟು ತಿಂಗಳು ಕಳೆದರೂ ಪ್ರಾರಂಭಿಕ ಹಂತದಿಂದ ಮುಂದೊಗಲಿಲ್ಲ. ಶಾಲೆಗೆ ಬೇಗಬೇಗ ಕಲಿಸಿಕೊಡಬೇಕೆಂಬ ಉಮೇದು ಮೊದಲೇ ಇರಲಿಲ್ಲ. ಇವನಿಗೂ ಅದರ ಅಸಕ್ತಿ ಕ್ಷೀಣಿಸುತ್ತಿರುವುದನ್ನು ಕಂಡು ಅವನ ಹವ್ಯಾಸವನ್ನು ಮೊಟಕುಗೊಳಿಸಬೇಕಾಯ್ತು. ಆದರೆ ಇವನು ಅಭ್ಯಾಸವನ್ನು ಬಿಡಲಿಲ್ಲ. ಮತ್ತದೆ ಇಂಟರ್ನೆಟ್, ಪ್ರಾರಂಭಿಕ ವಿದ್ಯೆಯನ್ನು ಹಿಂದಿ ಹಾಡನ್ನು ನುಡಿಸುವರೆಗೂ ಬೆಳೆಸಿಕೊಂಡ.

ಆತನ ಎಂಟನೇ ವಯಸ್ಸಿನಲ್ಲಿ ಮಂಗಳೂರಿಗೊಮ್ಮೆ ನನ್ನ ಮ್ಯೆದುನನ ಮನೆಗೆ ಎಲ್ಲರೂ ಹೊಗಿದ್ದೆವು. ನನ್ನ ಮ್ಯೆದುನನು ನನ್ನ ಮಡದಿಗೆ 3x3 ರೂಬಿಕ್ ಕ್ಯೂಬ್ ಹೇಳಿಕೊಡುತ್ತಿದ್ದಾಗ ಇವನು ಆಸಕ್ತಿಯಿಂದ ನೋಡುತ್ತಿದ್ದುದ್ದನ್ನು ಗಮನಿಸಿದ್ದೆ. ಬೆಂಗಳೂರಿಗೆ ಬಂದವನೇ 3x3 ರೂಬಿಕ್ ಕ್ಯೂಬ್ ಗೆ ಬೇಡಿಕೆಯಿಟ್ಟ.

ಮತ್ತೆ ಇಂಟರ್ನೆಟ್ ಗೆ ಲಗ್ಗೆಯಿಟ್ಟ. ಎರಡು ಮೂರು ಗಂಟೆಯಲ್ಲಿ 3x3 ರೂಬಿಕ್ ಕ್ಯೂಬ್ ಕರತಲಾಮಲಕವಾಗಿತ್ತು! ರೂಬಿಕ್ ಕ್ಯೂಬ್ನ ಆಸಕ್ತಿ ಅಷ್ಟಕ್ಕೆ ನಿಲ್ಲಲಿಲ್ಲ, ಮಿರರ್ ಕ್ಯೂಬ್, 2x2, 4x4, 5x5, ಹೀಗೆ ಹತ್ತಕ್ಕಿಂತ ಹೆಚ್ಚು ವಿಧವಿಧವಾದ ಕ್ಯೂಬ್ ಗಳ ಕಲೆಯಲ್ಲಿ ಪರಾಂಗತನಾಗಿದ್ದ!

ಈಗ ಅತನ ವಯಸ್ಸು ಹನ್ನೊಂದು. ಅನೇಕ ಹವ್ಯಾಸಗಳಿಂದ ತನ್ನ ಮನಸ್ಸನ್ನು ಸುಂದರವಾಗಿಸಿದ್ದಾನೆ. ಈಜು, ಡ್ಯಾನ್ಸ್, ಕರಾಟೆ, ಗಿಟಾರ್, ಸಯ್ಕ್ಲಿಂಗ್, ಚಿತ್ರಕಲೆ, ಆರಿಗಮಿ, ರೂಬಿಕ್ ಕ್ಯೂಬ್ ಹೀಗೆ ಅನೇಕ ಹವ್ಯಾಸಗಳಲ್ಲಿ ತೊಡಗಿಸಿಕೊಂಡದನ್ನು ಹಾಗೂ ಸಮಯವನ್ನು ಸದುಪಯೋಗಪಡಿಸುವ ರೀತಿಯನ್ನು ನನ್ನ ಬಾಲ್ಯಕ್ಕೆ ತುಲನೆ ಮಾಡಿರುವುದಿದೆ. ನಾನೇ ಆ ಹವ್ಯಾಸಗಳಲ್ಲಿ ಭಾಗಿಯಾದಂತೆ ಅವನ ಸಂತೋಷದಲ್ಲಿ ನನ್ನ ಸಂತೋಷವನ್ನು, ನನ್ನ ಬಾಲ್ಯವನ್ನು ಮತ್ತೊಮ್ಮೆ ಅವನ ಬಾಲ್ಯದಲ್ಲಿ ಕಂಡುಕೊಳ್ಳುವ ಪ್ರಯತ್ನ.  ಮಗುವು, ಬಾಲಕನಾಗಿ, ಯುವಕನಾಗಿ ಬೆಳೆಯುವುದ ನೋಡುವ ಅವಕಾಶ. ಜೀವನವನ್ನೊಮ್ಮೆ ಹಿಂದಿರುಗಿ ನೋಡುವ ಅನುಭವ! ಏನೋ ಗೆದ್ದಂತೆ, ನಾವು ಮಾಡಿದ ತಪ್ಪು ತಿದ್ದಂತೆ!


ನಿನ್ನೀ ಮನಸ್ಸಿನಂತೆ ಲೋಕ ವರ್ಣಮಯ!
ಬಣ್ಣ ತುಂಬಿರುವ ಬದುಕು ಸ್ವರ್ಗಮಯ!
ಸಾಧನೆ, ವೇದನೆಯ ಈ ಬದುಕಿನಲಿ
ಸಾಧಿಸು, ವೇದನೆಯ ಭೇದಿಸು!

ಮನಸ್ಸಿನ ಬಟ್ಟೆ ಕೊಳೆಯಾಗದಿರಲಿ,
ಬದುಕಿನ ಪಯಣ ಹೊರೆಯಾಗದಿರಲಿ,
ಬಣ್ಣಕ್ಕೂ, ಕೊಳೆಗೂ ವ್ಯತ್ಯಾಸವಿರಲಿ!
ಮಗುವಿನ ಮನಸಿನ ಆಯ್ಕೆ ಸದಾ ಇರಲಿ!

Comments

  1. ಏನೆಂದು ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ.. ಅಣ್ಣಾವ್ರ ಹಾಡಿನಂತೆ.. ಮುದ್ದಾದ ಮಗುವಿನ ಬೆಳವಣಿಗೆಯ ವಿವಿಧ ಹಂತಗಳನ್ನು ವಿವರಿಸುತ್ತಾ, ನಿನ್ನ ಮನಸ್ಸಿನ ವಿವಿಧ ಆಯಾಮಗಳನ್ನು ತೆರೆದಿಟ್ಟ ಪರಿಸೊಗಸಾಗಿದೆ . "ತಂದೆ"ಯೆಂದು ಬೀಗದೆ ಕಂಡ ಕೇಳಿದ್ದನ್ನೆಲ್ಲ "ತಂದೆ" ಎನ್ನದೆ.. ಅವಶ್ಯಕತೆ ತೋರಿಸುತ್ತಾ, ಮಗುವನ್ನು ಮಗನನ್ನಾಗಿ ಬೆಳೆಸುತ್ತಿರುವ ನಿನ್ನ ಮಾತೃ ಹೃದಯ ತುಂಬಿದ ಪಿತೃ ಹೃದಯಕ್ಕೆ ಸಲಾಂ.

    ಪ್ರತಿಹಂತವನ್ನು ವಿವರಿಸಿರುವ ಪರಿ, ಅದರ ಜೊತೆಯಲ್ಲಿ ಚಿಕ್ಕ ಚಿಕ್ಕ ಕವನಗಳು ನಿನ್ನ ಮನದಾಳದ ಸಾಗರದಲ್ಲಿ ತೇಲುತ್ತಿರುವ ಪುಟ್ಟ ನೌಕೆ.. ಎಲ್ಲವೂ ಹರಡಿರುವ ರೀತಿ ಸೊಗಸಾಗಿದೆ.

    ನಿನ್ನ ಬರವಣಿಗೆ ಅದ್ಭುತದಿಂದ, ಪವಾಡ ಸದೃಶ್ಯದ ಕಡೆಗೆ ಸಾಗುತ್ತಿದೆ.. ಅಂದುಕೊಂಡಂತೆ ಬರೆಯಬಲ್ಲ ಶಕ್ತಿ ನಿನಗಿದೆ.. ಮುಂದುವರೆಸು ಗೆಳೆಯ.. ಸೂಪರ್ ಸೂಪರ್ ಎಂದು ಹೇಳುತ್ತೇನೆ

    ReplyDelete

Post a Comment

Popular posts from this blog

ನನ್ನ ಗೆಳೆತನದ ಆಗಸದ....ರವಿ -ಸೋಮ!

ಗಿರಿಕನ್ಯೆ......ನನ್ನ ಮನದನ್ನೆ!

ನನ್ನ ಸಾಹಿತ್ಯದ ಶ್ರೀಕಾರನ ಸುತ್ತಾ....