ಝಣ...ಝಣ...ಹಣದ ನಿನಾದ!

ಕುರುಡು ಕಂಚಾಣ ಕುಣಿಯುತಲಿತ್ತೊ,
ಕಾಲಿಗೆ ಬಿದ್ದವರ ತುಳಿಯುತಲಿತ್ತೊ!

ಕವಿಯ ಈ ನುಡಿಯಲ್ಲಿ ಎಷ್ಟೊ ಅರ್ಥವಡಗಿದೆ.
ಹಣ ಎಂದೊಡನೆ ಎಲ್ಲರ ಕಿವಿ ನಿಮಿರುವುದು, ಸರ್ವವಿಧಿತ. ಹಣ ಎಂದರೆ, ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ, ವೇದ ಸುಳ್ಳಾದರೂ, ಗಾದೆ ಸುಳ್ಳಾಗದು ಎಂಬ ಮಾತನ್ನು ಅಕ್ಷರಶಃ ನಿಜವಾಗಿಸುತ್ತದೆ. ಪ್ರಪಂಚವೇ ಹಣದ ಸುತ್ತ ಸುತ್ತುತ್ತಿದೆ. ಎಲ್ಲ ವ್ಯವಹಾರವೂ ಹಣದ ಸುತ್ತ!

ಹಣವೆಂಬ ಮಾಯಾಕುದುರೆ ಏರಿ!
ಜಗವೆಂಬ ಪರ್ವತವನ್ನೇರುವ ಸಿದ್ದತೆ!
ಮನವೆಂಬ ಮರ್ಕಟ ಯಮಾರಿ!
ಏರಿತೇ ಪರ್ವತ? ಏರಿ ಗೆದ್ದೀತೇ?

ಜಗವೆಂಬ ಸುಂದರ ಮಾಯಾನಗರಿ
ಕೊಂಡುಕೊಳ್ಳುವ ಬಯಕೆ, ಬಯಸಿದೆಲ್ಲವ!
ಹಸಿವನು ಜಯಿಸಲು ಹಣ ಸಾಕಂತೆ!
ಮಗ, ಮಡದಿ ಸಾಕಲು ಹಣವೇ ಬೇಕಂತೆ!

ಹಣವೊಂದಿದ್ದರೆ, ಪ್ರಪಂಚದಲ್ಲಿ ಏನನ್ನಾದರೂ ಪಡೆಯಬಹುದೆಂಬ ನಂಬಿಕೆ ಹಲವರದು. ಹಣವನ್ನು ಪಡೆಯುವುದಕ್ಕಾಗಿ, ಹಲವಾರು ವೇಷಭೂಷಣಗಳು, ಹಲವಾರು ಮುಖವಾಡಗಳು. ಮೋಸ, ವಂಚನೆ, ದರೋಡೆ,..ಈ ಪದಗಳ ಜನ್ಮಕ್ಕೆ, ಕಾರಣವೇ ಈ ಹಣ ಎಂದರೆ ಅತೀಶಯೋಕ್ತಿಯಲ್ಲ.

ಹೌದು, ಏಕೆ ಈ ಹಣವೆಂದರೆ ನಮಗೆ ಅಷ್ಟೊಂದು ಮಮಕಾರ? ಹಣವಿಲ್ಲದಿದ್ದರೆ ಹೊಟ್ಟೆಗೆ ಹಿಟ್ಟಿಲ್ಲವೆಂಬ ಕಾರಣದಿಂದ ಹಿಡಿದು, ಸಂಬಂಧಿಕರ  ಮಧ್ಯೆ ಗೌರವವಿರುವುದಿಲ್ಲವೆಂಬ ಕಾರಣದವರೆಗೂ ಕಾರಣಗಳು ಹಲವಾರು

ಹಣವೇ ಎಲ್ಲಾ ಎಂಬ ಭಾವನೆಯ ಜೊತೆಜೊತೆಗೆ ಕೂಡಿಟ್ಟ ಹಣ ಸತ್ತಾಗ ಒಯ್ಯುವುದಿಲ್ಲವೆಂಬ ಜ್ಞಾನ ದ ಆಸರೆಯೊಂದಿಗೆ ಮಾನವ ಹಣದ ಮೇಲೆ ಅವಲಂಬಿತನಾಗಿದ್ದಾನೆ!  ಹಣವೆಂಬುದು ಬರೀಯೇ ಕಾಗದವೆಂಬ ವ್ಯೆರಾಗ್ಯದಿಂದ ಹಿಡಿದು, ಹಣವನ್ನು ಬಿಸಾಡುವ ಕಸದಬುಟ್ಟಿ ಇನ್ನು ಬಂದಿಲ್ಲವೆಂಬ ಲೌಕಿಕ ವಿಚಾರವಂತಿಕೆಯವರೆಗೂ ಮಾನವನ ವಿಚಾರಲಹರಿ, ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿರುತ್ತಾನೆ! ಹಣವಿದ್ದವನು ಖುಷಿಯಿಂದಿರುವನೇ ಎಂಬ ಪ್ರಶ್ನೆಗೆ ಹಣವಿಲ್ಲದವನು ಖುಷಿಯಿಂದಿರುವನೇ ಎಂಬ ಉತ್ತರದೊಂದಿಗೆ ಸಿದ್ದನಾಗಿರುತ್ತಾನೆ! ಕೊನೆಗೆ ಹಣ ಬೇಕೋ, ಬೇಡವೋ ಎಂಬ ಜಿಜ್ಞಾಸೆಗೆ, ಕೈ ಚಾಚುತ್ತಾ ಬೇಕು ಎನ್ನುವ ಕಡೆ ವಾಲಿಕೊಂಡಿರುತ್ತಾನೆ.

ಬಯಸಿ, ನೆನಸಿದೆಲ್ಲವೂ ಬೇಕು,
ಕನಸಿನಲ್ಲಿನ ಅರಮನೆಯೂ, ಮನಸಿನಲ್ಲಿನ ಅರಗಿಣಿಯೂ!
ಹಣವಿದ್ದರೆ ಇನ್ನೇನು ಬೇಕು!
ಅರಮನೆ, ಅರಗಿಣಿ ನನ್ನದಾಗಲೇ ಬೇಕು!

ಆರೋಗ್ಯವಿಲ್ಲದಿದ್ದರೇನು, ಧನಿಕ ನಾನು!
ಅಯೋಗ್ಯನಾಗಿದ್ದರೇನು, ಮಾಣಿಕ್ಯ ನಾನು!
ರೋಗಿ, ನಿರೋಗಿಯಾಗಲು ಹಣವೇ ಬೇಕು!
ಅಯೋಗ್ಯ, ಯೋಗ್ಯನಾಗಲು ಹಣವೊಂದೆ ಸಾಕು!

ಹಣ ಬೇಕು, ಅದರೆ ಎಷ್ಟು ಎಂಬ ಉತ್ತರ ಯಾರ ಅರಿವುಗೂ ಬರುವುದಿಲ್ಲ. ಉತ್ತರ ಗೊತ್ತಿದ್ದರೂ ಗೊತ್ತಿಲ್ಲದ ಅಜ್ಞಾನ ಹಲವರದು. ಅವಶ್ಯಕತೆಗೆ ಅನುಗುಣವಾಗಿ ಹಣಗಳಿಕೆಗಿಂತ, ಹಣಗಳಿಕೆಯ ಮೇಲೆ ಅವಶ್ಯಕತೆಗಳು ಹೆಚ್ಚಾಗುತ್ತವೆ. ಸುಖ ಹಣಗಳಿಸುವುದರಲ್ಲಿ ಕಂಡುಕೊಳ್ಳುತ್ತಾನೆ, ನೆಮ್ಮದಿ  ಹಾಳು ಮಾಡಿಕೊಳ್ಳುತ್ತಾನೆ, ಕಡೆಗೆ ಜೀವನವೆಲ್ಲಾ ಹಣವೆಂಬ ಸುಖದ ಮರೀಚಿಕೆಯ ಹಿಂದೆ ಓಡುತ್ತಿರುತ್ತಾನೆ. ಇದೇ ಜೀವನವೆಂಬ ಭ್ರಮೆಯಲ್ಲಿ ಜೀವನವನ್ನೇ ಗೆದ್ದೆ ಎನ್ನುವ ಮಾನವನಿಗೆ, ಜೀವನದ ನಿಶ್ಯಬ್ದ ನಗೆ ಅರ್ಥವಾಗುವುದಿಲ್ಲ ”ಅಯ್ಯೋ ಹುಚ್ಚ! ಹಣದ ಹಿಂದೆ ಬಿದ್ದ ನಿನಗೆ, ನನ್ನನ್ನು ಗೆಲ್ಕುವುದಿರಲಿ, ನನ್ನ ಅರ್ಥ ಕೂಡ ಮಾಡಿಕೊಂಡಿಲ್ಲ" ಎಂಬ ಪಿಸುಮಾತು ಕೇಳುವುದಿಲ್ಲ, ಸಾಯುವ ಘಳಿಗೆಯಲ್ಲಿ, ದೇವರು ನೀಡಿದ ಜೀವನ ಸರಿಯಾಗಿ ಕಳೆದಿಲ್ಲವೆಂದು ಜೀವನದ ಮುಂದೆ ಸೋಲನೊಪ್ಪಿಕೊಂಡಿರುತ್ತಾನೆ.  ಇದು ಒಬ್ಬನ ಮಾತಲ್ಲ, ಪ್ರತಿಯೊಬ್ಬನ ಜೀವನವು ಹೀಗೆಯೇ!

ಮಗುವಿನಿಂದ ಮುದುಕನಾಗುವವರೆಗೆ ಒಮ್ಮೆ ಜೀವನವನ್ನು ಅರ್ಥ್ಯೆಸಿಕೊಂಡಾಗ, ನಮ್ಮ ಜೀವನದ ಪಥವೇ ಬದಲಾಗಿರುವ ಅರಿವಾಗುತ್ತದೆ. ಮಗುವಾಗಿರುವಾಗ ನಮಗೆ ಹಣದ ಅರಿವೆಯೇ ಇರುವುದಿಲ್ಲ, ನಂತರ ಅದರ ಅವಶ್ಯಕತೆ ಅರಿವಾಗುತ್ತಾ ಹೋಗುತ್ತದೆ. ಕ್ರಮೇಣ ಹಣವೇ ಎಲ್ಲಾ ಎಂಬ ನಿರ್ಧಾರಕ್ಕೆ ಬಂದಿರುತ್ತೇವೆ.


ಮುಂದಿನ ಜನುಮದ ಭಯವಿಲ್ಲವೆನಗೆ!
ಹಿಂದಿನ ಜನುಮದ ಅರಿವಿಲ್ಲವೆನಗೆ!
ಪಾಪ, ಪುಣ್ಯದ ತೆವಲು ನನಗೇತಕೆ!
ಪ್ರೀತಿ, ಮಮತೆ ಎಲ್ಲಾ ವ್ಯಥೆಯ ಕಥೆ!

ಮುದುಕನಾಗುವೆನೆಂಬ ಕೊರಗಿಲ್ಲೆನಗೆ,
ಬಿಳಿಯ ಕೂದಲಿಗೆ ಕರಿಯ ರಂಗು!
ಸವೆದ ದಂತಗಳಿಗೆ ಸ್ವರ್ಣದ ಮೆರಗು!
ಬಾಗುವ ನಡುವಿಗೆ ಕೋಲಿನಾಸರೆ!
ನೋಡಲಾಗದ ಕಣ್ಣಿಗೆ ಗಾಜಿನಾಸರೆ!


ಜೀವನವೆಂದರೆ ಏನೆಂಬ ಕಲ್ಪನೆಯ ಅರಿವು ಅರಿವಾಗುವುದೇ ಇಲ್ಲ. ಈ ಜೀವವನ್ನು, ಸಾಯುವ ಘಳಿಗೆವರೆಗೂ ಸಾಗಿಸುವುದೇ ಜೀವನ. ಆದರೆ ರೀತಿ ಹಲವಾರು. ಈ ಜೀವಕ್ಕೆ ಆಡಂಬರದ ಅವಶ್ಯಕತೆಗಳನ್ನು ಪೂರೈಸುತ್ತಾ ಸಾಗಿಸುವ ಜೀವನ ಒಂದು ಕಡೆಯಾದರೆ, ಇರುವ ಅವಶ್ಯಕತೆಯಲ್ಲಿ, ಜೀವನವನ್ನು ಸಾಗಿಸುವ ರೀತಿ ಇನ್ನೊಂದೆಡೆ! ಆದರೆ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಗಳಿಸಿ ನಂತರ ಆಸೆಗೆ ಪೂರ್ಣವಿರಾಮ ಹಾಕಿ ಜೀವನದ ವಿವಿಧ ಮಜಲನ್ನು ಅನುಭವಿಸುವ ಉಮೇದು ಬರೀ ಕೆಲವರಿಗೆ. ದೇವರು ಕೊಟ್ಟ ಈ ಜೀವ, ಜೀವನ, ಮತ್ತು ಈ ಜಗತ್ತಿಗೆ ನಮ್ಮನ್ನು ದೂಡಿರುವುದು, ನಾವು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳಲೆಂದು, ಪ್ರಪಂಚದ  ಸಾವು, ನೋವು ನೋಡಿ ಜೀವನದ ಈ ವೈಭವತೆ ಬರೀಯೇ ಮುಸುಕು, ಎಂದು ಅರ್ಥೈಸಿಕೊಂಡವರು ಒಂದಿಬ್ಬರು.

ಆದರೆ ಈ ವಿಶಾಲವಾದ ಜೀವನ ತನ್ನೊಳಗೆ ಅನೇಕ ರಹಸ್ಯಗಳನ್ನು ಅದುಮಿಟ್ಟುಕೊಂಡು, ಭೇಧಿಸುತ್ತಾ ಹೋದಂತೆ ಮತ್ತಷ್ಟು ಕ್ಲಿಷ್ಟಕರವಾಗುತ್ತಾ, ಏನೋ ಇದೆ ಎಂಬ ಆಡಂಬರದಿಂದ, ಏನೂ ಇಲ್ಲ ಎಂಬ ವೈರಾಗ್ಯದವರೆಗೂ, ಅರ್ಥವಾದರೂ, ಅರ್ಥವಾಗದಂತೆ, ಕಣ್ಣೆದುರಿಗಿದ್ದು ಕಡೆಗೆ ಮಾಯವಾಗುವ, ಅನಂತತೆಯ ಸಾರುತ್ತಾ ತನ್ನೊಳಗೆ ತಾನು ನಗುತ್ತಾ, ನಮ್ಮನ್ನು ಅಳಿಸುತ್ತಾ, ನಗಿಸುತ್ತಾ ಸಾಗುತ್ತಿದೆ!

ದೇಹ ನಡುಗಿದೆ, ಭಾರವಾಗಿದೆ ಉಸಿರು!
ಕಾಣದ ಜಗಕೆ ಕರೆ, ಅದು ನನದೇ ಹೆಸರು!
ಹೊತ್ತೊಯ್ಯುವಾಸೆ ಕೂಡಿಟ್ಟ ಹಣ ಸಂಪತ್ತು!
ಬರಲೊಪ್ಪರಾರು ಮನ ಮಡದಿ ಮಕ್ಕಳು!

ಕಣ್ಣಿಂದ ಜಾರಿದ ಕಂಬನಿ ಒರಸಲೊಪ್ಪಲಾರು!
ಹೋಗುವ ಜೀವಕೆ, ಎರಡು ಹನಿ ಸುರಿಸಲಾರು!
ಅಳುತ್ತಿದೆ ಅಯೋಗ್ಯ ಮನ, ನಗುತಿದೆ ಕೂಡಿಟ್ಟ ಧನ!
ಹಣದ ಪಿಸುಮಾತು ಪ್ರಶ್ನಿಸಿದೆ, ಎಲ್ಲಿದೆ ಬೆಲೆ ನಿನಗೆ!
ಮನದ ಒಳಮಾತ ಉತ್ತರ, ಬೆಲೆಯಿದ್ದದ್ದು ನನಗಲ್ಲ ನಿನಗೆ!
Comments

 1. ಹಣ ಹಣ ಯಾರಿಗೆ ಬೇಕೋ ನಿನ್ನ ಹಣ ಎಂದು ಹೇಳುವಾಗ... ತಣ್ಣಗೆ ನಗುತ್ತಿರುತ್ತದೆ ಹಣ..
  ಹೆಣವಾಗುವ ಪರಿಸ್ಥಿತಿಗೆ ಬಂದಾಗ... ಹೆಣವನ್ನು ಒಪ್ಪಮಾಡಬೇಕಾದರೂ ಅದಕ್ಕೆ ಹಣ ಬೇಕೇ ಬೇಕು.. ಉದಾಹರಣೆ ಸತ್ಯ ಹರಿಶ್ಚ೦ದ್ರ ಕಥೆಯಲ್ಲಿ ಕಾಣಸಿಗುತ್ತದೆ..

  ಈ ಕಾಂಚಾಣದ ಹರಿವನ್ನು ಮನುಜನ ಅರಿವಿಗೆ ತರುವ ಅನೇಕ ಹಂತಗಳಲ್ಲಿ ಮೂಡಿ ಬಂದಿರುವ ನಿನ್ನ ಲೇಖನ ಖುಷಿಕೊಡುತ್ತದೆ.

  ಹುಟ್ಟಿನಿಂದ ಅಂತಿಮ ಪಯಣದ ತನಕ ಈ ಕಾಂಚಾಣದ ಮಹಿಮೆಯನ್ನು ಗುಪ್ತಗಾಮಿನಿಯ ಹಾಗೆ ಕೆಲವೊಮ್ಮೆ ನೇರವಾಗಿ ಹರಿ ಬಿಟ್ಟಿರುವ ನಿನ್ನ ಲೇಖನ ನಿನ್ನ ಭಾಷೆಯ ಮೇಲಿನ ಹಿಡಿತವನ್ನು ತೋರಿಸುತ್ತದೆ..

  ಅದ್ಭುತ ಲೇಖನಮಾಲಿಕೆ ಮುಂದುವರೆಯಲಿ

  ReplyDelete

Post a Comment

Popular posts from this blog

ನನ್ನ ಗೆಳೆತನದ ಆಗಸದ....ರವಿ -ಸೋಮ!

ಗಿರಿಕನ್ಯೆ......ನನ್ನ ಮನದನ್ನೆ!

ನನ್ನ ಸಾಹಿತ್ಯದ ಶ್ರೀಕಾರನ ಸುತ್ತಾ....