ಗೆಳೆತನದ ಮಿಡಿತ!

ಮನದಲ್ಲೊಂದು ಪ್ರಶ್ನೆ ಎರಡು ಮೂರು ದಿನದಿಂದ ಎಡಬಿಡದೆ ಕಾಡುತ್ತಿತ್ತು. ಉತ್ತರ ಗೊತ್ತಾಗದ ಅಸಹಾಯಕತೆ, ಉತ್ತರ ಗೊತ್ತಾಗಿಯು ಒಪ್ಪಿಕೊಳ್ಳಲಾರದಂತ ಮನಸ್ಥಿತಿ. ಏಕೋ ಮೊದಲಿನ ಜೀವನವೇ ಉತ್ತಮ ಎಂಬ ಫಿಲಾಸಫಿ!

ನನಗೆ ಗೆಳೆಯರು ತುಂಬಾ ಕಡಿಮೆ, ಕಾರಣ ನನ್ನ ಮಾತು ಕಡಿಮೆ, ಅಂತರ್ಮುಖಿ, ಅಷ್ಟೊಂದು ಸುಲಭವಾಗಿ ತೆರೆದುಕೊಳ್ಳಲಾರದಂತ ಮನಸ್ಸು, ಗೆಳೆತನಕ್ಕೆ ನೀಡಬೇಕಾದ ಸಮಯ ನೀಡಲಾಗದ ಅಸಹಾಯಕತೆ, ಹೀಗೆ ಕಾರಣ ಹಲವು!

ಬೆರಳೆಣಿಕೆಯಷ್ಟು ಗೆಳೆಯರು, ನೆಚ್ಚಿನ ಮಡದಿ, ಮುದ್ದಿನ ಮಗ, ಜೀವನ ಇವರ ಮದ್ಯ ಸುಂದರವಾಗಿ ಸಾಗುತ್ತಿತ್ತು. ಅನಿವಾರ್ಯತೆಗಳ ಆಧಾರಗಳ ಮೇಲೆ ನನ್ನ ಸಮಯ ಇವರುಗಳೊಂದಿಗೆ ವಿನಿಯೋಗವಾಗುತ್ತಿತ್ತು!

ಸಂಬಂಧಗಳಿಗೆ ಬೆಲೆ ಕೊಡುವುದು ಎಷ್ಟು ಮುಖ್ಯವೋ, ಸಮಯ ನೀಡುವುದು ಅಷ್ಟೇ ಮುಖ್ಯ. ನಾನು ಮತ್ತು ನನ್ನ ಮಡದಿ ಹಲವಾರು ಬಾರಿ ಯೋಚಿಸಿದ್ದಿದೆ, ನಮ್ಮ ಬಳಿ ಸಮಯವೇ ಇಲ್ಲವೆಂದು. ಟ್ರಾಫಿಕ್ ಪೊಲೀಸ್, ಹೆಲ್ಮೆಟ್ ಇಲ್ಲವೆಂದೊ ಅಥವಾ ಮತ್ತಾವುದೊ ಕಾರಣಕ್ಕೆ ನಿಲ್ಲಿಸಿ ಸಮಯ ವ್ಯರ್ಥಮಾಡಿದರೆ, ಆತನಿಗೆ ಒಂದು ಸಲಾಮ್ ಹೊಡೆದು, ಸಮಯ ಹಾಳುಮಾಡದೆ ಕೊಡಬೇಕಾದ ಶುಲ್ಕ ಕೊಟ್ಟು, ಅಲ್ಲಿಂದ ಪಾರಾಗುವುದು ಮುಖ್ಯವಾಗುತ್ತದೆಯೇ ಹೊರತು, ಆತನೊಂದಿಗೆ ವ್ಯರ್ಥ ಕಾಲಾಹರಣ ಮಾಡಿ ೧೦೦-೨೦೦ ಉಳಿಸುವ ಸಮಯವಿರುವುದಿಲ್ಲ. ಇದನ್ನು ನೆನಪಿಸಿಕೊಂಡು ಅಸಹಾಯಕತೆಯ ನಗೆ ನಕ್ಕು ಸುಮ್ಮನಾಗಿದ್ದಿದೆ!

ಸಂಬಂಧಗಳು ನಮ್ಮ ಜೀವನಶೈಲಿಗೆ ತಳುಕುಹಾಕಿಕೊಂಡು, ದೋಣಿಯ ಲಯಕ್ಕೆ, ನದಿಯ ನೀರು ಪ್ರಶಾಂತವಾಗಿ ಹರಿಯುವಂತೆ, ಜೊತೆಯಾಗಿದ್ದರೆ, ನೋಟ ಮನೋಹರ! ಅದೇ ದೋಣಿ, ನದಿಯ ನೀರಿನ ಆರ್ಭಟಕ್ಕೆ ಸಿಲುಕಿ, ದಿಕ್ಕುದೆಸೆ ಇಲ್ಲದೆ ಸಾಗಿದರೆ? ಹಾಗಾಗಿದೆ ಮನಸ್ಥಿತಿ!

ಸಂಬಂಧಗಳನ್ನು ನಿಭಾಯಿಸುವ ಕಲೆ ಹೆಣ್ಣಿಗೆ ಕರತಲಾಮಲಕ, ಅದು ಯೂನಿವರ್ಸಲ್ ಟ್ರೂಥ್! ಹುಟ್ಟಿದ ಮನೆ ಬಿಟ್ಟು, ಗಂಡನೊಂದಿಗೆ ಹೊಸ ಸಂಬಂಧಗಳಿಗೆ ತಳುಕು ಹಾಕಿಕೊಳ್ಳುವ ಹಾಗು ಕಾಲಕ್ರಮೇಣ ಗಂಡನಿಗಿಂತ ಹೆಚ್ಚಾಗಿ ಆ ಮನೆಯವರನ್ನು ಮನಸ್ಸಿನ ಒಳಗೆ ತೆಗೆದುಕೊಳ್ಳುವ ಕಲೆ, ನನಗೆ ಇನ್ನೂ ನಿಗೂಢ ಹಾಗು ಅಚ್ಚರಿ! ಸಂಬಂಧಿಕರು ನಾವು ಆಯ್ಕೆ ಮಾಡಿದ್ದಲ್ಲ ಅದು ಗಂಡನೊಂದಿಗೊ ಅಥವಾ ಹೆಂಡತಿಯೊಂದಿಗೊ ಬಂದ ಬಳುವಳಿ, ಇಷ್ಟವಾದರೂ, ಇಪ್ಟವಾಗದಿದ್ದರೂ ನಿಭಾಯಿಸಲೇಬೇಕಾದ ಪರಿಸ್ಥಿತಿ! ಹೆಣ್ಣಿಗಾದರೆ ಅದು ಅನಿವಾರ್ಯ! ಕಾಲದೊಂದಿಗೆ ಅವರೊಳಗೊಬ್ಬಳಾಗುವ ಸೋಜಿಗ! ನದಿಯ ನೀರಿನ ಅರ್ಭಟಕ್ಕೆ ದೋಣಿಯನ್ನು ತಹಬದಿಗೆ ತರುವ ಕಲೆ!

ಗೆಳೆಯರು ನಾವು ಮೆಚ್ಚಿ, ಒಪ್ಪಿ, ನಮ್ಮ ಸ್ವಭಾವಗಳಿಗುಣವಾಗಿ ಆಯ್ಕೆ ಮಾಡಿಕೊಳ್ಳುವ ಸಂಬಂಧ! ನದಿಯ ನೀರು ಪ್ರಶಾಂತವಾಗಿ ಹರಿಯುವ ಹಾಗೆ, ನದಿಯ ನೀರಿಗೂ, ದೋಣಿಗೂ ಸಂಬಂಧವಿಲ್ಲದಂತೆ, ದೋಣಿಯ ಚಲನೆಗೆ ಅನುಗುಣವಾಗಿ ಸಾಗುತ್ತಿರುತ್ತದೆ! ಇದನ್ನು ನಿಭಾಯಿಸುವುದು ಸುಲಭ!

ಇನ್ನೂ ಕೆಲವು ಗೆಳೆಯರು ಜೀವನದಲ್ಲಿ ಆಕಸ್ಮಿಕವಾಗಿ ಸಿಗುವಂತವರು, ಹೆಣ್ಣಿಗೆ ಮದುವೆಯಾದ ನಂತರ ಸಿಗುವ ಸಂಬಂಧಗಳ ಹಾಗೆ! ಈ ಗೆಳೆಯರು ಗಂಡನ ಸ್ನೇಹಿತರಾಗಿರಬಹುದು, ಹೆಂಡತಿಯ ಸ್ನೇಹಿತೆಯರಾಗಿರಬಹುದು ಅಥವಾ ಎಷ್ಟೋ ವರ್ಷಗಳ ನಂತರ ಸಿಗುವ ಸಹಪಾಠಿಗಳಾಗಿರಬಹುದು! ಇವರ ಸಂಖ್ಯೆ ದೊಡ್ಡದಾಗಿದ್ದರೆ? ಹೆಂಡತಿಗೆ ಸಿಗುವ ಗಂಡನ ಸಂಬಂಧಿಕರ ತರಹ!

೩೦ ವರ್ಷಗಳ ನಂತರದ ಸಹಪಾಠಿಗಳ ಭೇಟಿ ಮನಸ್ಸಿಗೆ ಮುದವನ್ನು ತಂದಿತ್ತು. ಒಮ್ಮೆಲೆ ಅಷ್ಟೊಂದು ಗೆಳೆಯರ ಅಗಮನ ನನ್ನ ಜೀವನದಲ್ಲಿ ಖುಷಿಯನ್ನೂ ಜೊತೆಯಲ್ಲಿ ತಂದಿತ್ತು! ಆದರೆ ಸಮಯ? ಸಮಯ ನೀಡದ ಗೆಳತನ ಹೆಚ್ಚು ದಿನ ಬಾಳುವುದಿಲ್ಲವೆಂಬ ಎಂಬ ಸಂಶಯ. ಅವರವರ ಜೀವನದಲ್ಲಿ ಅವರೂ ಮಗ್ನ, ಸಮಯ ಹೆಚ್ಚಾಗಿ ಯಾರು ನಿರೀಕ್ಷಿಸುವುದಿಲ್ಲವೆಂಬ ಸಮಾಧಾನ. ಆದರೆ ಗೆಳೆತನ ಗಟ್ಟಿಯಾಗುವ ಬಗೆ? ಉತ್ತರವಿಲ್ಲದ ಎಷ್ಟೋ ಪ್ರಶ್ನೆಗಳಿಂದ ಮನಸ್ಸು ಅಸಹಾಯಕವಾಗಿತ್ತು!

ಇದರಲ್ಲಿ ಆಯ್ಕೆ ಇಲ್ಲ! ಎಲ್ಲರೂ ಗೆಳೆಯರು. ಗುಣಗಳು ಬೇರೆ, ಹವ್ಯಾಸಗಳು ಬೇರೆ, ವ್ರತ್ತಿ ಬೇರೆ, ಬಾವನೆಗಳು ಬೇರೆಬೇರೆ, ಆದರೆ ಮನಸ್ಸು?

ಎಲ್ಲರಿಗೂ ಸಮಯ ನೀಡಲು ಸಾದ್ಯವೇ ಎಂಬ ಪ್ರಶ್ನೆಯ ಜೊತೆಯಲ್ಲಿಯೇ ನಿನ್ನ ಗೆಳತನವನ್ನು ನಿಜವಾಗಿ ಬಯಸುವ ಸಂಖ್ಯೆ ಗೌಣ ಎಂಬ ಉತ್ತರ! ಈ ಗೆಳಯರ ಬಳಗದಲ್ಲಿ ಎಷ್ಟು ಜನ ನನ್ನ ಆಯ್ಕೆಯ ಗೆಳೆಯರಾಗಬಹುದೆಂಬ ಪ್ರಶ್ನೆಯ ಜೊತೆಯಲ್ಲಿಯೇ, ಪ್ರಶಾಂತ ನದಿಯ ನೀರಿನಂತೆ ಈ ಗೆಳೆಯರ ಬಳಗದಲ್ಲಿ ಹಲವರು ಎಂಬ ಉತ್ತರ! ಗೆಳಯರ ಬಳಗದಲ್ಲೂ ಆಯ್ಕೆ ಸಮಂಜಸವೇ ಎಂಬ ಪ್ರಶ್ನೆಗೆ  ಮತ್ತು ನನ್ನ ಎಲ್ಲಾ ಮನಸ್ಥಿತಿಗೂ ಉತ್ತರವಾಗಿ ಮೌನವಾಗಿರುವ ಗೆಳೆಯರ ಬಳಗದ ವಾಟ್ಸಪ್ನಲ್ಲಿ ಗೆಳಯರ ಗೆಳೆತನದ ಮಿಡಿತ ಹಿತವಾಗಿ ಕೇಳುತ್ತಿದೆ!

Comments

  1. ಅಣ್ಣಾವ್ರ ಹೊಸಬೆಳಕು ಚಿತ್ರದ "ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೋ ಆಸೆಯ ತೋರಿ ಗಾಳಿಗಿಂತ ವೇಗವಾಗಿ ಹರಿಯುತಿದೆ"

    ಮೂವತ್ತು ವರ್ಷಗಳಿಂದ ಅಡೆತಡೆದು ಸಾಗುತ್ತಿದ್ದ ನಿನ್ನ ಲೇಖನ ಕಾವ್ಯ ಮಾಲಿಕೆಗಳಿಗೆ ಸರಿಯಾದ ಹೊತ್ತು ಮೂಡಿಬಂದಿದೆ

    ಗೆಳೆತನ, ಮನುಜನ ಬ್ಯುಸಿ ಜೀವನ, ಅಡೆತಡೆಗಳು, ಸಾಂಸಾರಿಕ ಬಂಧನ ಎಲ್ಲವನ್ನು ಮಿತವಾಗಿ ಕಲಸಿ ಬಡಿಸಿರುವ ಲೇಖನ ಸೊಗಸಾಗಿದೆ

    ಸೂಪರ್ ಗೆಳೆಯ ಮುಂದುವರೆಯಲಿ

    ReplyDelete

Post a Comment

Popular posts from this blog

ಒಂದು ಮಗುವಿನ ಕಥೆ...

ಝಣ...ಝಣ...ಹಣದ ನಿನಾದ!

ಗಿರಿಕನ್ಯೆ......ನನ್ನ ಮನದನ್ನೆ!