ನನ್ನ ಸಾಹಿತ್ಯದ ಶ್ರೀಕಾರನ ಸುತ್ತಾ....

ಯುಗಾದಿಯ ದಿನ ಬ್ಲಾಗ್ ಪ್ರಾರಂಭ ಮಾಡಲು ಒಳ್ಳೆಯ ದಿನ ಎಂದು ಮುದ್ದಿನ ಮಡದಿಯ ಉವಾಚ! ಎಷ್ಟೋ ದಶಕಗಳ ನಂತರ ಸಾಹಿತ್ಯದಲ್ಲಿ ಆಸಕ್ತಿ ಮೂಡಲು ಪ್ರಾರಂಭವಾಗಿತ್ತು! ಇದಕ್ಕೆ ಕಾರಣ ಶ್ರೀ! ಶ್ರೀ ನನ್ನ ಬಾಲ್ಯ ಸ್ನೇಹಿತ. 3೦ ವರ್ಷಗಳ ನಂತರ ಹಳೆಯ ಸ್ನೇಹಿತರನ್ನೆಲ್ಲಾ ಒಟ್ಟು ಸೇರಿಸಿದ ಭಗೀರಥ!  ವಾಟ್ಸಪ್ ಎಂಬ ಸಣ್ಣ ಅ್ಯಪ್ನಲ್ಲಿ ಮೂಲೆಮೂಲೆಗಳಲ್ಲಿ ಚದುರಿಹೋಗಿದ್ದ ಬಾಲ್ಯದ ೩0ಕ್ಕಿಂತ ಹೆಚ್ಚು ಸ್ನೇಹಿತರನ್ನು ಒಟ್ಟುಗೂಡಿಸಿದ್ದ! ಬಾಲ್ಯದಲ್ಲಿ ಆತನೊಂದಿಗೆ ಕಾಲಕಳೆದ್ದಿದ್ದ ಒಂದೇ ಒಂದು ಉದಾಹರಣೆಯು ನೆನಪಿಗೆ ಬಂದಿರಲಿಲ್ಲ, ಆದರೆ ಯಾಕೋ ತುಂಬಾ ಆತ್ಮೀಯನಾಗಿಬಿಟ್ಟಿದ್ದ. ಅದೊಂದು ದಿನ ಅಚಾನಕ್ ಆಗಿ ತನ್ನ ಬ್ಲಾಗ್ ಲಿಂಕನ್ನು ಕಳುಹಿಸಿಕೊಟ್ಟಿದ್ದ. ಸ್ನೇಹಿತನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬ್ಲಾಗ್ ಸಂಪೂರ್ಣವಾಗಿ ಓದುವಂತೆ ಮಾಡಿತ್ತು. ಆತನು ಬರೆದ ಅದ್ಬುತ ಬರವಣಿಗೆ ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು! ಸಾಹಿತ್ಯ ಒಮ್ಮೆಲೆ ಮ್ಯೆಯನ್ನು ಆವರಿಸಿದ ಸ್ಥಿತಿ. ಅದೊಂದು ದಿನ ಶ್ರೀ ತನ್ನ ಅತ್ತೆಯನ್ನು ಕಳೆದುಕೊಂಡ ದುಃಖದಲ್ಲಿದ್ದ. ನನಗೆ ದುಃಖದಲ್ಲಿರುವರನ್ನು ಸಂತ್ಯೆಸುವ ಕಲೆ ಬಾರದು! ಏನು ಹೇಳಬೇಕೆಂದು ತೋಚಲಿಲ್ಲ. ಕಳೆದುಕೊಂಡವರಿಗಷ್ಟೇ ಗೊತ್ತು ಕಳೆದ ವಸ್ತುವಿನ ಬೆಲೆ! ಸುಮ್ಮನಾದೆ! ಮಾರನೆಯ ದಿನ ಮಧ್ಯಾನ್ಹದ ಸುಮಾರಿಗೆ ಶ್ರೀ ಮತ್ತೊಂದು ಲಿಂಕನ್ನು ಕಳುಹಿಸಿದ. "ಹಳ್ಳಿಯಾತನ ಅಮರವಾಣಿ" ಎಂಬ ಆ ಲೇಖನ ನನ್ನನ್ನು ಕೆಲವು ಘಳಿಗೆ ಸ್ಥಬ್ಧನಾಗಿಸಿತು! ಏನು ಹೇಳಬೇಕೆಂದು ತೋಚಲಿಲ್ಲ! ನನ್ನ ಪರಿವೆ ಇಲ್ಲದೆ ಕಣ್ಣಿಂದ ಜಾರಿದ ಆ ಕಂಬನಿ ಲೇಖನದ ಸಾರ್ಥಕತೆಯನ್ನು ಸಾರುತ್ತಿತ್ತು!  ನನ್ನಲ್ಲಿ ಶಬ್ದಗಳಿರಲಿಲ್ಲ! ಮನವೆಲ್ಲಾ ಭಾವುಕವಾಗಿತ್ತು! ಆ ಜಾರಿದ ಕಣ್ಣೀರು ಅದ್ಬುತ ಲೇಖನವನ್ನೋದಿದ ಸಂತೋಷಕ್ಕೋ ಅಥವಾ ಆ ಲೇಖನದಲ್ಲಿದ್ದ ದುಗುಡವೆಲ್ಲಾ ಒಮ್ಮೆಲೆ ಕಣ್ಣೀರಿನ ರೂಪವಾಯ್ತೋ ಅರಿಯದಾದೆ!  ಭಾವುಕ ಮನಸ್ಸಿನ ಶ್ರೀಗೆ ನನ್ನ ಅರ್ಧ ಬೆಂದ ಕವನ ರೂಪದಲ್ಲಿ ನನ್ನ ಅಭಿಪ್ರಾಯ ವನ್ನಿತ್ತೆ! ನನ್ನ ಮೊದಲ ಕವನ ೨೦ ವರ್ಷಗಳ ನಂತರ!

ಭಾವನೆಯಿಲ್ಲದ ಜೀವವುಂಟೆ?
ಭಾವುಕವಲ್ಲದ ಮನಸ್ಸುಂಟೆ?
ಈ ಭಾವನೆ, ಭಾವುಕತ್ವಗಳ ನಡುವೆ ಸಾಗುವ ಯಾನ,
ದುಃಖ, ದುಗುಡ, ದುಮ್ಮಾನ,
ಸುಖ, ಸಂತೋಷ, ಸನ್ಮಾನ,
ಅತಿಯಾದರೆ ಬರುವುದು ಕಣ್ಣೀರೇ,
ಕಣ್ಣೀರಿಗೆ ವಿಧವಿಧ ಅರ್ಥ,
ಭಾವನೆಗೆ ಇರುವುದೊಂದೆ ಅರ್ಥ,
ಭಾವುಕತ್ವ!

ವಾಟ್ಸಪ್ನಲ್ಲಿ ಗೆಳೆಯರ ಮಾತುಕತೆ ತೀವ್ರಗತಿಯಲ್ಲಿ ಸಾಗಿತ್ತು! ಎಲ್ಲರದು ಒಂದೇ ಅಭಿಪ್ರಾಯ ಒಂದು ರವಿವಾರ ಎಲ್ಲರೂ ಒಟ್ಟಿಗೆ ಬೆರೆಯಬೇಕೆಂದು. ದಿನವು ನಿಶ್ಚಯವಾಯಿತು. ಎಲ್ಲರಲ್ಲೂ ಅದಮ್ಯ ಉತ್ಸಾಹ! 3೦ ಧೀರ್ಘವರ್ಷಗಳ ನಂತರ ಸೇರುತ್ತಿದ್ದೀವೆಂದು! ಆಗ ಮೂಡಿಬಂದ ಈ ಕವನ!

ಬಾಲ್ಯದ ಆ ನೆನಪುಗಳು.
ಗೆಳತನ ಕಲಿಸಿದ ಆ ಸ್ನೇಹಿತರು,
ಸೃತಿಪಟಲದ ಮೇಲೆ ಮೂಡಿದ ಆ ಹೆಸರುಗಳು,
ಹೆಸರಿನ ಜೊತೆಗೆ ನೆನಪಾದ ಆ ಮುಗ್ದ ಮುಖಗಳು,
ಕಾಲಾಂತರ ಗರ್ಭದಲ್ಲಿ ಅಡಗಿ ಹೋದ ಆ ಎಷ್ಟೋ ನೆನಪುಗಳು,
ಇವಕ್ಕೆಲ್ಲ ಉತ್ತರ ಈ ರವಿವಾರ,
ನೆನಪುಗಳನ್ನು ಅಮರವಾಗಿಸುವ,
ಮೊದಲ ಸ್ನೇಹ ಕಲಿಸಿದ ಗೆಳಯರ ಆಲಂಗಿಸುವ,
ಮನದಲಿ ಮೂಡಿದ ಆ ಹೆಸರುಗಳ ಕೂಗಿ ಕರಿಯುವ,
ಆ ಮುಗ್ದಮುಖಗಳ ತಾಳೆ ಹಾಕುವ,
ಅಡಗಿ ಹೋದ ನೆನಪುಗಳ ಕೆದಕಿ ತೆಗೆಯುವ!

ಸ್ನೇಹಿತರೆಲ್ಲಾ ಒಟ್ಟು ಸೇರುವ ದಿನ ಬಂದೇಬಿಟ್ಟಿತು. ನಿಗದಿತ ದಿನದಂದು, ನಿಗದಿತ ಸಮಯದಲ್ಲಿ, ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಬಾಲ್ಯಸ್ನೇಹಿತರೆಲ್ಲ ಒಟ್ಟಾದೆವು. ಯಾವುದೋ ತಿಳಿಯದ ಸಂತೋಷ ಮನದಲ್ಲಿ ಆವರಿಸಿಕೊಂಡಿತ್ತು! ಆ ರವಿವಾರ ಬಾಳಿನ ಮತ್ತೊಂದು ಸುಂದರ ದಿನಕ್ಕೆ ಸಾಕ್ಷಿಯಾಗಿತ್ತು. ಮನದಲ್ಲಿ ಮೂಡಿದ ಭಾವನೆಗಳಿಗೆ ಅಕ್ಷರರೂಪ ಕೊಡಲು ತಡಕಾಡುತ್ತಿದ್ದೆ. ಆ ಸಂದರ್ಭದಲ್ಲಿ ಮೂಡಿಬಂದ ಶ್ರೀಯ ಲೇಖನ ನನ್ನ ಮನದಲ್ಲಿದ್ದ ಮಾತನ್ನು ಅಕ್ಷರಶಃ ಅಕ್ಷರವಾಗಿಸಿತ್ತು!

KNPS Whatsup ನ ಶ್ರೀಕಾರ,
ಭಾವನೆಗಳ ಮಹಾಪೂರ,
ಸ್ನೇಹಿತರ ನಡುವಿನ ಅಯಸ್ಕಾಂತ,
ಶ್ರೀಕಾಂತ, ಶ್ರೀಕಾಂತ, ಶ್ರೀಕಾಂತ,

ಮೇಲಿನ ಕವನರೂಪದ ನಾಲ್ಕು ಸಾಲನಷ್ಟೆ ಶ್ರೀಗೆ ನಾನು ಹೇಳಲು ಸಾಧ್ಯವಾಗಿತ್ತು! ಉಳಿದ ಅಕ್ಷರಗಳು ಶ್ರೀಯ ಲೇಖನದಲ್ಲಿ ಸಾಕಾರವಾಗಿತ್ತು!

ಅಷ್ಟರಲ್ಲಾಗಲೇ ವಾಟ್ಸಪ್ ಗೆಳೆಯರ ಬಳಗ ಬೆಳೆದಿತ್ತು. ಮಾತನಾಡುವುದು ಬೆಟ್ಟದಷ್ಟಿದ್ದರೂ, Forwardಗಳು, Good Morning, Good Evening ಮೇಸೆಜುಗಳೇ ಮಾತುಗಳಾಗಿದ್ದವು. ಶ್ರೀಯ forwarded messages ಬೇಡ ಕಣ್ರೋ ಎಂಬ ಮಾತನ್ನು ಅಥವಾ ಕೆಳಗಿನ ನನ್ನ ಕವನ ರೂಪದ ಬೇಡಿಕೆಯನ್ನು ಯಾರು ಗಂಭೀರವಾಗಿ ಪರಿಗಣಿಸಲಿಲ್ಲ!

Good Morning, Good Evening, ಕೇಳಿ ಬೇಜಾರಾಗ್ಯೆತ್ಲೋ ಗೆಳೆಯ!
ಹುಡುಕಿಬಂದೆವು ಇಲ್ಲಿ ಹಳೆಯ ಗೆಳೆಯ ಗೆಳತಿಯರ ವಿಷಯ!
ಆ ಜೋಕ್ಸ್, ಈ ಜೋಕ್ಸ್, ಹಳೆಯದಾಯ್ತೋ ಗೆಳೆಯ!
ನೀ ಹಾಸ್ಯ ಮಾಡಿದ, ಕಾಲೆಳದ ಘಳಿಗೆಯ ಮರೆತೆಯ?
ಒಮ್ಮೆ ಹೆಕ್ಕಿ ನೋಡು, ಹಂಚಿ ನೋಡು!
ಬಾಲ್ಯಕ್ಕೊಮ್ಮೆ ಹೊಕ್ಕಿ ನೋಡು!

ಎಷ್ಟು ಹೇಳಿದರೂ ಕೇಳದೆ forwarded messageಗಳನ್ನು ಕಳುಹಿಸುತ್ತಿದ್ದ ಗೆಳಯರನ್ನು ಮುಲಾಜಿಲ್ಲದೆ ವಾಟ್ಸಪ್ನಿಂದ ಕಿತ್ತಿದ್ದ ಶ್ರೀ! ಕೆಲವರಿಂದ ೩೦ ವರ್ಷದ ಗೆಳೆತನದ ಕೊಂಡಿಯಾಗಿದ್ದ ಈ ವಾಟ್ಸಪ್ ಬರೀಯೆ forwarded messages ಗಳಿಗೆ ಮೀಸಲಾಗಿರಬಾರದೆಂದು!

Forwarded messages ಇಲ್ಲದೆ ವಾಟ್ಸಪ್ ಮೌನವಾಗಿತ್ತು! ಏಕೋ ಮೌನವನ್ನು ಮುರಿಯಬೇಕೆಂದು, ಗೆಳಯರ ಮಾತುಕತೆಗೆ ಏನದರೂ ಕಾರಣ ತೆಗೆಯಬೇಕೆಂದು ಈ ಕವನವನ್ನು ವಾಟ್ಸಪ್ನಲ್ಲಿ ತೇಲಿಬಿಟ್ಟೆ!

ಅಂದು:

ನಿಶ್ಯಬ್ದ, ನಿಶ್ಯಬ್ದ, ನಿಶ್ಯಬ್ದ,
ಗುಡುಗುತ್ತಿದ್ದರು ಮಾಸ್ತರರು ಶಾಲಾದಿನಗಳಲ್ಲಿ,
ಅಲ್ಲೊಬ್ಬ, ಇಲ್ಲೊಬ್ಬ, ಮಗದೊಬ್ಬ,
ಪಿಸುಗುಡುತ್ತಿದ್ದರು ಸಿಕ್ಕ ಅವಕಾಶಗಳಲ್ಲಿ,
ಅಷ್ಟೊಂದು ಮಾತನಾಡುವ ವಿಷಯವೇನೆಂಬ ಪ್ರಶ್ನೆ ಅವರಲ್ಲಿ,
ವಿಷಯ ನೂರಷ್ಟು, ಸಮಯ ಬಹಳಷ್ಟು ನಮ್ಮಲ್ಲಿ,

ಇಂದು:

ಗೆಳೆಯ ಗೆಳತಿಯರು ಕಣ್ಣೆದುರಲ್ಲಿ,
ಮಾತನಾಡುವುದೇನೆಂಬ ಪ್ರಶ್ನೆ ನಮ್ಮಲ್ಲಿ,
ವಿಷಯ ಅಲ್ಲೊಂದು, ಇಲ್ಲೊಂದು,
ಹುಡುಕಬೇಕು ಸಮಯವೆಲ್ಲೆಂದು,
ಸಮಯ ಬದಲಾಯಿತೋ, ವಿಚಾರ  ಬದಲಾಯಿತೋ!
ಇಲ್ಲಾ ಕಾಲಂತರದಲ್ಲಿ ನಾವೇ ಬದಲಾದೆವೋ!

ಮಾತಡ್ರೋ ಎನ್ನುವ ಮಾಸ್ತರರೊಬ್ಬರು ಬೇಕೆನಿಸುತ್ತದೆ,
ಬಾಲ್ಯಕ್ಕೊಮ್ಮೆ ಹೋಗಬೇಕೆನಿಸುತ್ತದೆ,
ಜೀವನ ದೊಡ್ಡದು, ಕಳೆದುಕೊಂಡದ್ದೆಷ್ಟೊ! ಪ್ರಪಂಚ ಸಣ್ಣದು, ಪಡೆದುಕೊಂಡದೆಷ್ಟೊ!
ಆದರೆ ಕಳೆದು ಪಡೆದುಕೊಂಡದ್ದೊಂದೇ!
ಆ ಶಾಲಾದಿನದ, ಈ ಗೆಳೆಯ ಗೆಳತಿಯರು!

ಎಂಭತ್ತು ಭಾಗದಷ್ಟು ಸ್ನೇಹಿತರ ಕನ್ನಡ ಭಾಷೆಯ ಮೇಲಿನ ಹಿಡಿತ ನಂಬಲಸಾದ್ಯ! ಭಾಷೆಯ ಮೇಲಿನ ಹಿಡಿತ ಅಕ್ಷರ ಜೋಡಣೆಗೆ ಬರುತ್ತಿಲ್ಲವೆಂಬ ಬೇಸರ. ಆದರೂ ಕನ್ನಡ ಭಾಷೆ ಸುಂದರ! ಅಕ್ಷರಗಳೆಲ್ಲಾ ಕವನವಾದಗ?

ಭಾವನೆಗಳೇ ಅಕ್ಷರ ರೂಪವಾಗಿರುವಾಗ!
ಅಕ್ಷರ ಜೋಡಣೆ ನೆಪ ಮಾತ್ರ!
ಭಾವನೆಯೇ ಕಾವ್ಯವಾಗಿರುವಾಗ!
ಭಾವನೆಯೊಳಗೆಲ್ಲ ಅಕ್ಷರವೇ!

ಶ್ರೀಯ ಆ ಒಂದು ಹಾಸ್ಯ ಕವನ ನನ್ನನ್ನು ಶ್ರೀ ಡುಂಡಿರಾಜರನ್ನು ನೆನಪಿಸಿಕೊಳ್ಳುವಂತೆ ಮಾಡಿತು.

(ಡುಂಡಿರಾಜರ ಕ್ಷಮೆಯಾಚಿಸುತ್ತಾ)

ಮನೆಯಲ್ಲಿ ಯಾವಾಗಲು ಗಂಡಂದಿರದೇ ಕಾರುಬಾರು,
ಆದರೆ ಹೆಂಡತಿ ಸ್ವಲ್ಪ ಜೋರು ಬಜಾರು,
ಗಂಡನಿಲ್ಲದಿರೆ, ಅವಳಿಗೆ ಬೋರು,
ಸಿಗುವುದಿಲ್ಲವೆಂದು ಯಾರೂ ಮಾಡುವುದಕ್ಕೆ ಜೋರು!
ಮನೆಯಂತಾಗಿದೆ ಈಗ ಕಾರು!
ತಿಂಡಿತೀರ್ಥಕ್ಕೆಲ್ಲಾ ಬಾರೇ ದರ್ಬಾರು!

ಹಾಸ್ಯಕವನಕ್ಕೆ ಹ್ಯೂಮರ್ ತುಂಬಾ ಅಗತ್ಯ, ಅದು ನನ್ನಲ್ಲಿ ಅಲ್ಪಸ್ವಲ್ಪ ಇದ್ದಿದ್ದರಿಂದ ಹಾಸ್ಯಕವನದ ಪ್ರಯತ್ನ ಮಾಡಬೇಕೆಂದುಕೊಂಡೆ!

ಹೆಂಡತಿಯರಿಗೆ ಗಂಡಂದಿರೆ ಪರದ್ಯೆವ!
ಕುಡಿದು ಬರುವ ಗಂಡನಿಗೆ ಪಾದುಕೆ ಸೇವೆ,
ಲೇಟಾಗಿ ಬರುವ ಮಹಾಶಯರಿಗೆ ಮಂಗಳಾರತಿ,
ಮಿಕ್ಕ ಗಂಡಂದಿರಿಗೆ ಕಾರಣವಿಲ್ಲದೆ ಸಹಸ್ರನಾಮ!

ಗಂಡನಿಗೆ ಹೆಂಡತಿಯೇ ಎಲ್ಲಾ!
ತೊಡುವ ಅಂಗಿ ಕಾಣದಿರೆ ಆಕೆಯೇ ಚಿಂಗಾರಿ!
ಹೊಟ್ಟೆಯ ಯೋಚನೆ ಬರಲು ಆಕೆಯೇ ಬಂಗಾರಿ!
ಪುಡಿಗಾಸಿನ ಅಗತ್ಯ ಬೀಳಲು ಆಕೆಯೇ ತಿಜೋರಿ!
ಉಳಿದ ಸಮಯದಲ್ಲಿ ಆಕೆ ಬರೀ ಬಜಾರಿ, ಗ್ರಹಚಾರಿ!

ಇಂದು ಉಗಾದಿ! ಮುದ್ದಿನ ಮಡದಿ ಹಬ್ಬದ ಸಡಗರದಲ್ಲಿದ್ದಳು! ಮಧ್ಯೆ ಮಧ್ಯೆ ಅಡಿಗೆಯ ಕೆಲಸವಾಗುತ್ತಿಲ್ಲವೆಂದು ಹುಸಿ ಮುನಿಸು! ಅವಳ ಮನದಲ್ಲಿ ಮಾಡಬೇಕಾದ ಕೆಲಸಗಳ ಕಥಕ್ಕಳಿ! ಅಡಿಗೆಯ ಕೆಲಸವಾಗಬೇಕು, ದೇವರಿಗೆ ಪೂಜೆ ಮಾಡಬೇಕು, ಇದರ ಮಧ್ಯೆ ಆಫೀಸಿಗೆ ರಜೆ ಇರದ ಕಾರಣ ಆಫೀಸಿಗೆ ಹೋಗಬೇಕು, ಅದೂ ಸೀರೆಯಲ್ಲಿ!

ಇದರ ಮಧ್ಯೆ ನಾನು ಜೀವನ ಮತ್ತು ಉಗಾದಿಯ ನಡುವೆ ತಾಳೆ ಹಾಕುತ್ತಿದ್ದೆ!

ಜೀವನವೇ ಒಂದು ಉಗಾದಿ!
ಎರಡಕ್ಕೂ ಉಂಟು ಅಂತ್ಯ ಆದಿ!

ಉಗಾದಿಯ ದಿನ ಪ್ರತಿ ಮನೆಯಲಿ ರಂಗವಲ್ಲಿ!
ಪಸರಿಸಲಿ ಸಂತಸದ ರಂಗು ಮನ ಮನದಲ್ಲಿ!

ಮನೆಯ ಮುಂದಿನ ಆ ತಳಿರು ತೋರಣ!
ಜೀವನದ ಸುಂದರ ಮುನ್ನುಡಿಗಾಗಲಿ ಕಾರಣ!

ದೇವರ ನಾಮಗಳ ಗಂಟೆ ಶಂಖಗಳ ನಿನಾದ!
ಜೀವನದ ತುಂಬೆಲ್ಲಾ ಶುಭಹಾರಯ್ಕೆಯ ಸುಗಂಧ!

ಹೊಸ ಸಾಲಿನ ಸಂಭ್ರಮಕೆ ಹೊಸ ಉಡುಗೆ ತೊಡುಗೆ!
ಜೀವನವು ಸುಂದರ ಅವಕಾಶಗಳ ಕೊಡುಗೆ!

ಉಗಾದಿ ಹಬ್ಬದ ಆ ಸಿಹಿಭಕ್ಷ್ಯದೂಟ!
ಜೀವನದಲ್ಲೆಂದು ಇರಲಿ ಆತ್ಮೀಯರ ಒಡನಾಟ!

ಉಗಾದಿಯೆಂದರೆ ನೆನಪಾಗುವುದು ಬೇವುಬೆಲ್ಲ!
ಜೀವನದ ಸಂಕೇತ ಈ ಆಗುಹೋಗುಗಳಿಗೆಲ್ಲಾ!

ಉಗಾದಿಯ ಸುಮಧುರ ಕ್ಷಣವಾಗಿಸುವ ತವಕ ಪ್ರತಿ ಎದೆಯಲ್ಲೂ!
ಜೀವನವೊಂದು ಉಗಾದಿ, ನಡೆ ಉಮೇದಿನಲಿ, ಸುಂದರ ಕ್ಷಣವಾಗಿಸುವ ಪ್ರತಿ ನಡೆಯಲ್ಲೂ!

ಯಾಕೋ ಜೀವನದ ಅರ್ಧಾಂಗಿಗೆ ಬರೆದ ಕವನ ಮೊದಲು ಕಳುಹಿಸಬೇಕೆನಿಸಿತು.

ಕವನ ಓದಿದ ಅವಳ ಅಭಿಪ್ರಾಯ "ಕವನ ಚೆನ್ನಾಗಿದೆ ಆದರೆ ಒಂದೆರಡು ಸಾಲು ಅರ್ಥವಾಗಲಿಲ್ಲ"! ಎಂದಿನಂತೆ ನನ್ನ ಮುದ್ದಿನ ಮಡದಿಯ ಮಾತು ತುಟಿಯೊಳಗೊಂದು ಮುಗುಳ್ನಗೆ ಮೂಡಿಸಿತ್ತು, ಬಾಲ್ಯದ ಪ್ರಶ್ನೆಪತ್ರಿಕೆಯ ಈ ಪ್ರಶ್ನೆಗಳನ್ನು ಮತ್ತು ಉತ್ತರ ಬರೆಯದ ಆ ಉತ್ತರಗಳನ್ನು ನೆನೆದು!

ಪ್ರಶ್ನೆ ೧: ಕವಿಯು ತಮ್ಮ ಕವಿತೆಯಲ್ಲಿ ಏನನ್ನು ಹೇಳಲು ಬಯಸಿದ್ದಾರೆ?
ಬರೆಯದ ಉತ್ತರ :ಪ್ರಾಣ ತಿಂತಾನಲ್ಲಪ್ಪ! ಅವ್ನು ಏನು ಹೇಳ್ತಾ ಇದ್ದನೋ ಏವನಿಗೆ ಗೊತ್ತು!

ಪ್ರಶ್ನೆ ೨: ಕವಿಯ ಮಾತಿನ ಈ ಒಳ ಅರ್ಥವೇನು?
ಬರೆಯದ ಉತ್ತರ : ಸೀದ ಅರ್ಥನೇ ಅರ್ಥವಾಗಿಲ್ಲ, ಇನ್ನು ಒಳ ಅರ್ಥ ಬೇರೆ ಇದ್ಯ? ಭಗವಂತ!!!

ಪ್ರಶ್ನೆ ೩,೪....  ತುಟಿಯ ಮೇಲಿನ ಮುಗುಳ್ನಗೆ.....ಹಿರಿದಾಗುತ್ತಾ ಹೋಯಿತು!

Comments

  1. ಈ ಸುಂದರ ದಿನದಂದು ಸುಂದರ ನಿರ್ದಾರ ನಿನ್ನದು
    ಆತ್ಮೀಯ ಆಗೋಕೆ ಬೇಕಿಲ್ಲಾ ಹೊತ್ತು

    ನಿನ್ನ ವಿಚಾರ ಲಹರಿ ಅದ್ಭುತವಾಗಿ ಮೂಡಿ ಬಂದಿದೆ..ಪ್ತತಿ ಘಟನೆಗಳನ್ನು ಕಾವ್ಯದ ಮೂಲಕ‌ ದಾಖಲಿಸಿರುವುದು ನಿನ್ನ ಪ್ರತಿಭೆಗೆ ಸಾಕ್ಷಿ

    ಮುಂದುವರೆಯಲಿ ಈ ಕೃಷಿ
    ಬಿತ್ತಿದ್ದು ಬೆಳೆಯಲೇ ಬೇಕು

    ಬ್ಲಾಗ್ ಲೋಕಕ್ಕೆ ಸ್ವಾಗತ!

    ReplyDelete

Post a Comment

Popular posts from this blog

ಒಂದು ಮಗುವಿನ ಕಥೆ...

ಝಣ...ಝಣ...ಹಣದ ನಿನಾದ!

ಗಿರಿಕನ್ಯೆ......ನನ್ನ ಮನದನ್ನೆ!